newsics.com
ಬೆಂಗಳೂರು:KSRTC’ಪಲ್ಲಕ್ಕಿ’ ಬಸ್ ಸೇವೆಯನ್ನು ಪರಿಚಯಿಸಿದ ನಂತರ, ಸ್ಲೀಪರ್ ಬಸ್‌ಗಳಿಗಾಗಿ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಸಾರಿಗೆ ಸಂಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ 30 ಸೀಟರ್-ಕಮ್-ಸ್ಲೀಪರ್ ಹಾಗೂ 70 ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆದಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಸೀಟರ್-ಕಮ್-ಸ್ಲೀಪರ್ ಬಸ್‌ಗಳನ್ನು ಬಿಡಲು ಮುಂದಾಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು, ‘ನಾವು ಸೀಟರ್-ಕಮ್-ಸ್ಲೀಪರ್ ಬಸ್‌ಗಳನ್ನು ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದ್ದೇವೆ. ಈಗಾಗಲೇ, ಬೇರೆ ರಾಜ್ಯಗಳ ಸಾರಿಗೆ ನಿಗಮಗಳು ಹಾಗೂ ಖಾಸಗಿ ಟ್ರಾವೆಲ್ಸ್‌ಗಳು ಇಂತಹ ಬಸ್‌ಗಳನ್ನು ಓಡಿಸುತ್ತಿವೆ. ನಮ್ಮ ಪ್ರಯಾಣಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ತಿಳಿಯಲು ಆರಂಭದಲ್ಲಿ 30 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಿದ್ದೇವೆ’ ಎಂದು ಹೇಳಿದ್ದಾರೆ.
ನೂತನ ಸೀಟರ್-ಕಮ್-ಸ್ಲೀಪರ್ ಬಸ್‌ಗಳ ಪ್ರಾಯೋಗಿಕ ಸಂಚಾರ ಶುರುವಾದ ಬಳಿಕ, ಕೆಎಸ್‌ಆರ್‌ಟಿಸಿಯ ತಾಂತ್ರಿಕ ಪರಿಣಿತರ ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ನೀಡಲಿದೆ. ಫಲಿತಾಂಶಗಳು ತೃಪ್ತಿಕರವಾಗಿದ್ದರೆ, ಸಾರಿಗೆ ಸಂಸ್ಥೆಯು ಮತ್ತಷ್ಟು ಬಸ್‌ಗಳನ್ನು ಖರೀದಿ ಮಾಡಲಿದೆ. ಒಂದೊಮ್ಮೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೆ, ಈ ಬಸ್‌ಗಳ ಖರೀದಿಸುವ ಆದೇಶವನ್ನು ರದ್ದುಪಡಿಸಬಹುದು ಎಂದು ವರದಿಯಾಗಿದೆ.
ಕೆಎಸ್‌ಆರ್‌ಟಿಸಿ ಸ್ಲೀಪರ್ ಕಂ ಸೀಟರ್ ಬಸ್ ಜೊತೆಯಲ್ಲಿ 110 ಹೊಸ ಬಸ್ ಖರೀದಿಸಲು ಟೆಂಡರ್ ಕರೆದಿದೆ. ಪಲ್ಲಕ್ಕಿ- 70, ಸ್ಲೀಪರ್ ಕಂ ಸೀಟರ್ – 30 ಅಂಬಾರಿ- 20 ಹಾಗೂ ಐರಾವತ ಡ್ರೀಮ್ ಕ್ಲಾಸ್- 20 ಒಟ್ಟು – 140 ಬಸ್ಸುಗಳನ್ನು ಖರೀದಿ ಮಾಡಲು ಟೆಂಡರ್ ಕರೆಯಲಾಗಿದ್ದು, ಟೆಂಡರ್ ನಿಯಾವಳಿಗಳ ಅನ್ವಯ ಮುಂದಿನ 6 ತಿಂಗಳಿನಲ್ಲಿ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.