newsics.com
ಆನೇಕಲ್ (ಬೆಂಗಳೂರು ಗ್ರಾಮಾಂತರ): ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತನ್ನ ಪತ್ನಿಯನ್ನು ನಡುರಸ್ತೆಯಲ್ಲಿ ಪತಿಯೊಬ್ಬ ಚಾಕುವಿನಿಂದ ಏಳೆಂಟು ಬಾರಿ ಇರಿದು ಬರ್ಬರವಾಗಿ ಕೊಂದಿರುವ ಘಟನೆ ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
6 ವರ್ಷದ ಮಗುವನ್ನ ಶಾಲೆಗೆ ಬಿಡಲು ಹೋಗುತ್ತಿದ್ದ ಹೆಂಡತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ, ಚುಚ್ಚಿ ಕ್ರೌರ್ಯ ಮೆರೆದಿದ್ದಾನೆ.
ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪತಿ ಈ ಕೃತ್ಯ ಎಸಗಿದ್ದಾನೆ. ಶ್ರೀಗಂಗಾ (29) ಕೊಲೆಯಾದ ಮಹಿಳೆ. ಮೋಹನ್ ರಾಜು (32) ಪತ್ನಿಯನ್ನು ಕೊಲೆಗೈದ ಪತಿ ಮಹಾಶಯ.
ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿರುವ ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. ಮೋಹನ್ ರಾಜ್ ಸ್ನೇಹಿತನ ಜತೆ ಶ್ರೀಗಂಗಾ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಇತ್ತು. ಈ ಸಂಬಂಧ ಎರಡ್ಮೂರು ವರ್ಷದಿಂದ ಮೋಹನ್ ರಾಜ್ ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ.
ಕೊನೆಗೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ 8 ತಿಂಗಳಿನಿಂದ ಮೋಹನ್ ರಾಜ್ ಹಾಗೂ ಶ್ರೀಗಂಗಾ ದೂರವಾಗಿದ್ದರು. ಮಂಗಳವಾರ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನ ನೋಡಲು ಶ್ರೀಗಂಗಾಳ ಮನೆಗೆ ತೆರಳಿದ್ದ. ಆ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ.
ಇದರಿಂದ ಕೋಪಗೊಂಡ ಮೋಹನ್ ರಾಜ್, ಶ್ರೀಗಂಗಾಳನ್ನು ಕೊಲೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾನೆ. ಅದರಂತೆ ಬುಧವಾರ (ಫೆ.5) ಬೆಳಗ್ಗೆ ಶ್ರೀಗಂಗಾ ಮಗುವನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಪತಿ ಮೋಹನ್ ರಾಜ್ ಪತ್ನಿ ಶ್ರೀಗಂಗಾ ಮೇಲೆ ಅಟ್ಯಾಕ್ ಮಾಡಿದ್ದು, ಏಳೆಂಟು ಬಾರಿ ಚಾಕುವಿನಿಂದ ಇರಿದು ತನ್ನ ಸಿಟ್ಟು ತೀರಿಸಿಕೊಂಡಿದ್ದಾನೆ.
ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪತಿ ಹಾಗೂ ಆತನ ಸ್ನೇಹಿತ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಈ ಹಿಂದೆ ಪತಿಯ ಸ್ನೇಹಿತನನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಈ ವೇಳೆ ಪತಿಯ ಸ್ನೇಹಿತ ಹಾಗೂ ಮೃತಳ ನಡುವೆ ಸಂಬಂಧ ಇದೆ ಎಂದು ಗಲಾಟೆ ಆಗಿದೆ. ನಂತರ ಪತಿ ಪತ್ನಿ ದೂರವಾಗಿದ್ದರು ಎಂದರು.
actress soundarya wedding ನಟಿ ಜಯಮಾಲಾ ಮಗಳು ಮದುವೆಯಾಗ್ತಿರೋ ಹುಡುಗ ಇವ್ರೇ ನೋಡಿ
ಕಪ್ಪತ್ತಗುಡ್ಡಕ್ಕೆ ಬೆಂಕಿ: ಔಷಧೀಯ ಸಸ್ಯಗಳು, ಪ್ರಾಣಿ- ಪಕ್ಷಿಗಳು ಬೆಂಕಿಗಾಹುತಿ