ಬಿಹಾರ: ಸರಕಾರಿ ನಿವಾಸದಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಪುತ್ರನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಶಕೀಲ್ ಅಹ್ಮದ್ ಖಾನ್ ಅವರ ಪುತ್ರ ಅಯಾನ್ ಖಾನ್ ಶವ ಪಟ್ನಾದಲ್ಲಿರುವ ಸರಕಾರಿ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ನಡೆದ ವೇಳೆ ತಂದೆ ಶಕೀಲ್ ಅಹ್ಮದ್ ಖಾನ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದ್ದು ಪೊಲೀಸರ ಮಾಹಿತಿ ಪ್ರಕಾರ ಅಯಾನ್ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಡ್ವಾದ ಕಾಂಗ್ರೆಸ್ ಶಾಸಕರಾಗಿರುವ ಶಕೀಲ್ ಅಹ್ಮದ್ ಖಾನ್ ಅವರು ಪಶ್ಚಿಮ ಬಂಗಾಳದ ಪಕ್ಷದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಅವರ ಪುತ್ರನ ಅಕಾಲಿಕ ನಿಧನಕ್ಕೆ ಸಂಸದ ಪಪ್ಪು ಯಾದವ್, ಜಾರ್ಖಂಡ್ ಸಚಿವೆ ದೀಪಿಕಾ ಪಾಂಡೆ ಸಂತಾಪ ಸೂಚಿಸಿದ್ದಾರೆ.