newsics.com
ಬಾಗ್ದಾದ್: ಒಂಬತ್ತು ವರ್ಷ ಮೇಲ್ಪಟ್ಟ ಹುಡುಗಿಯರನ್ನು ಮದುವೆಯಾಗಲು (Iraq marriage act) ಪುರುಷರಿಗೆ ಅವಕಾಶ ನೀಡುವ ವಿವಾಹ ಕಾನೂನನ್ನು ಜಾರಿಗೊಳಿಸಲು ಇರಾಕ್ ಸರ್ಕಾರ ಸಜ್ಜಾಗಿದೆ.
ಅಲ್ಲದೆ ಮಹಿಳೆಯರಿಂದ ವಿಚ್ಛೇದನ, ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದ ಹಕ್ಕುಗಳನ್ನು ಕಸಿದುಕೊಳ್ಳಲು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ
ಶಿಯಾ ಪಕ್ಷಗಳ ಒಕ್ಕೂಟದ ನೇತೃತ್ವದ ಸಂಪ್ರದಾಯವಾದಿ ಸರ್ಕಾರವು ಅನೈತಿಕ ಸಂಬಂಧಗಳಿಂದ ಹುಡುಗಿಯರನ್ನು ರಕ್ಷಿಸುವ ಸಲುವಾಗಿ ಈ ಕಾನೂನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದೆ.
ಹೊಸ ಕಾನೂನಿನ ತಿದ್ದುಪಡಿಯನ್ನು ಸೆಪ್ಟೆಂಬರ್ 16 ರಂದು ಅಂಗೀಕರಿಸಲಾಗಿದೆ. ಇದನ್ನು ಲಾ 188 ಎಂದು ಹೆಸರಿಸಲಾಗಿದ್ದು, 1959 ರಲ್ಲಿ ಇದನ್ನು ಪರಿಚಯಿಸಲಾಗಿತ್ತು. ಇದು ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ಪ್ರಗತಿಪರ ಕಾನೂನುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಪ್ರಸ್ತಾವಿತ ತಿದ್ದುಪಡಿಯು ಇಸ್ಲಾಮಿಕ್ ಷರಿಯಾ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನಕ್ಕೆ ಅನುಗುಣವಾಗಿದೆ ಎಂದು ಸಮ್ಮಿಶ್ರ ಸರ್ಕಾರ ಹೇಳಿದೆ. ಈ ಹೊಸ ಕಾನೂನಿನ ವಿರುದ್ಧ ಇರಾಕ್‌ನ ಮಾನವ ಹಕ್ಕು ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಸಂಘಟನೆಗಳು ಸಿಡಿದೆದ್ದಿವೆ. ಬಾಲಕಿಯರ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಈ ಕಾನೂನು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವುದರಿಂದ ಗರ್ಭಪಾತ, ಬಾಲ ಗರ್ಭಧಾರಣೆ, ಗರ್ಭಿಣಿಯರ ಸಾವು ಹಾಗೂ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಳ ಆಗುತ್ತವೆ ಎಂದು ಸಂಘಟನೆಗಳು ವಾದಿಸಿವೆ.
ವಿಶ್ವಸಂಸ್ಥೆಯ ಯುನಿಸೆಫ್ ಪ್ರಕಾರ ಇರಾಕಿನಲ್ಲಿ ಈಗಾಗಲೇ ಬಾಲ್ಯವಿವಾಹ ಹೆಚ್ಚಾಗಿದೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ ಸುಮಾರು ಶೇ.28ರಷ್ಟು ಹುಡುಗಿಯರು 18 ವರ್ಷ ವಯಸ್ಸಿನೊಳಗೆ ಮದುವೆಯಾಗುತ್ತಾರೆ ಎಂದು ತಿಳಿದುಬಂದಿದೆ.