newsics.com
ಬೆಂಗಳೂರು: ಹಿಂದಿ ಭಾಷಿಕ ಯುವತಿ ರಸ್ತೆಯಲ್ಲಿ ವಿಡಿಯೋ ಮಾಡುತ್ತ ಸಾಗುವುದನ್ನು ನೋಡಿದ ಸೈಕಲ್ ಸವಾರ ಹುಡುಗನೊಬ್ಬ ಏಕಾಏಕಿ ಯುವತಿಯ ಎದೆಯ ಭಾಗ ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು ಹಾಕಿದ್ದಾಳೆ.
ಬೆಂಗಳೂರು ಯುವಕನಿಂದ ಕಿರುಕುಳಕ್ಕೆ ಒಳಗಾದ ಯುವತಿ ನೇಹಾ ಬಿಸ್ವಾಲ್. ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದ ಈ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ರಜೆ ದಿನ ಹಾಗೂ ಕೆಲಸ ಮುಗಿಸಿ ಮನೆಗೆ ಹೋಗುವಾಗ ವ್ಲಾಗ್ ಮಾಡುತ್ತಾ, ಚೆನ್ನಾಗಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಳು.
ಈ ಯುವತಿ ಇನ್‌ಸ್ಟಾಗ್ರಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾಳೆ. ಬೆಂಗಳೂರಿನಲ್ಲಿರುವ ಪಬ್, ಕ್ಲಬ್, ಶಾಪಿಂಗ್ ಮಾಲ್ ಸೇರಿದಂತೆ ಕೋರಮಂಗಲ, ಬಿಟಿಎಂ ಲೇಔಟ್, ಮಡಿವಾಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ವಿಶೇಷತೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಹವ್ಯಾಸ ಹೊಂದಿದ್ದಳು.
ಕಳೆದ ಸೋಮವಾರ ಕೆಲಸ ಮುಗಿಸಿ ತನ್ನ ರೂಮಿನತ್ತ ನಡೆದು ಹೋಗುವಾಗ ಬಿಟಿಎಂ ಲೇಔಟ್‌ನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಿಸುತ್ತಾ ವ್ಲಾಗ್ ಮಾಡುತ್ತಿದ್ದಳು.
ಈ ವೇಳೆ, ಎದುರಿಗೆ ಸೈಕಲ್‌ನಲ್ಲಿ ಬಂದ ಯುವಕನೊಬ್ಬ ಮೊದಲು ಈ ಯುವತಿಗೆ ಹಾಯ್ ಮಾಡುತ್ತಾನೆ. ನಂತರ, ಆಕೆಯ ಎದೆಗೆ ಕೈ ಹಾಕಿ ಕಿರುಕುಳ ಕೊಟ್ಟು ಪರಾರಿ ಆಗಿದ್ದಾನೆ. ವಿಡಿಯೋದಲ್ಲಿ ಆತನ ಮುಖ ಕಾಣದಂತೆ ತಪ್ಪಿಸಿಕೊಂಡಿದ್ದಾನೆ. ಆದರೆ, ವಿಡಿಯೋದಲ್ಲಿ ಯುವಕ ಎದೆಭಾಗಕ್ಕೆ ಕೈ ಹಾಕಿ ಕಿರುಕುಳ ನೀಡಿರುವುದು ಸಹ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಹೇಳುವ ಪ್ರಕಾರ, ಸೈಕಲ್‌ನಲ್ಲಿ ಬಂದ ಹುಡುಗನೊಬ್ಬ ನನಗೆ “ಹಾಯ್” ಎಂದು ಹೇಳಿ, ಇದ್ದಕ್ಕಿದ್ದಂತೆ ಎದೆ ಭಾಗ ಮುಟ್ಟಿ ಕಿರುಕುಳ ನೀಡಿ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾಳೆ.
ನೇಹಾ ನಂತರ ತನ್ನ ಸಾಮಾಜಿಕ ಜಾಲತಾಣದ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದು, ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ.
https://twitter.com/i/status/1854009605246054478
ಮಹಿಳೆಯರೇ, ಆಸ್ಪತ್ರೆಗಳಲ್ಲಿ ಶೌಚಾಲಯ ಬಳಸುವ ಮುನ್ನ ಎಚ್ಚರ! ವಿಡಿಯೋ ಚಿತ್ರೀಕರಣ ಆರೋಪಿ ಬಂಧನ