newsics.com
ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ನೋಂದಣಿಯಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಲ್ಲು ತೂರಾಟ ನಡೆಸಲಾಗಿದೆ.
ತಾವು ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ.
ಗ್ರಾಮದ ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ 32 ಜನರನ್ನು ವಶಕ್ಕೆ ಪಡೆದಿದ್ದಾರೆ.
ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಮನೆ ಮುಂದಿದ್ದ ಬೈಕ್ ಜಖಂಗೊಳಿಸಲಾಗಿದೆ. ವಕ್ಸ್ ಹೆಸರಿಗೆ ಆಸ್ತಿ ಮನೆಗಳನ್ನು ವರ್ಗಾಯಿಸಿಕೊಂಡು ಖಾಲಿ ಮಾಡಿಸುತ್ತಾರೆ ಎಂಬ ವದಂತಿಯಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಳೆದ ಸೆಪ್ಟೆಂಬರ್ 3 ರಂದು ಸಭೆ ನಡೆಸಿದರು. ಈ ವೇಳೆ ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಕ್ಪ್ ಆಸ್ತಿಗಳನ್ನು ವಕ್ಪ್ ಸಂಸ್ಥೆ ಹೆಸರಿನಲ್ಲಿ ಖಾತೆಕರಣ ಮಾಡಬೇಕು. ವಕ್ಪ್ ಆಸ್ತಿಗೆ ಸೇರಿದ ಖಾತೆಗಳಲ್ಲಿ ವಕ್ಪ್ ಆಸ್ತಿ ಎಂದು ಲಾಕ್ ಮಾಡಲು ಪಿಡಿಒಗಳಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸೆಪ್ಟೆಂಬರ್ 27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ಅವರಿಂದ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ನಡೆಯಿಂದ ಜನರು ಆಕ್ರೋಶಗೊಂಡು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ ಮಾಹಿತಿ ತಿಳಿದು ರಾತ್ರೋರಾತ್ರಿ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಹಾಗೂ ಎಸ್ಪಿ ಅಂಶುಕುಮಾರ್ ಕಡಕೋಳ ಗ್ರಾಮಕ್ಕೆ ದೌಡಾಯಿಸಿದರು. ಮತ್ತೆ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಮುಂದಾದ ಪೊಲೀಸರು, ಗಲಾಟೆಗೆ ಪ್ರಚೋದನೆ ನೀಡಿದರನ್ನೂ ಪತ್ತೆ ಮಾಡಲು ಮುಂದಾಗಿದ್ದಾರೆ. ಸದ್ಯ ಸವಣೂರು ತಾಲೂಕಿನ ಕಡಕೋಳ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ.
ವೈಯಕ್ತಿಕವಾಗಿ ಯಾರಿಗೂ ನಾವು ನೋಟಿಸ್ ಕೊಟ್ಟಿರಲಿಲ್ಲ. ಹಿಂದೆ ಇದ್ದ ಪಟ್ಟಿ ಮೇಲೆ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ವಕ್ಫ್ ಆಸ್ತಿ ಎಂದು ಮನೆ ದಾಖಲೆಗಳಲ್ಲೂ ನಮೂದಿಸುತ್ತಾರೆಂದು ಜನ ಭಯಗೊಂಡಿದ್ದಾರೆ. ಆ ಭಯದಿಂದ ಗಲಾಟೆ ಮಾಡಿದ್ದಾರೆ. ಯಾರಿಗೂ ನೋಟಿಸ್ ಕೊಟ್ಟಿರಲಿಲ್ಲ, ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ ದೂರು ಕೊಡಲು ಯಾರೂ ಸಿದ್ಧರಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಎಸ್‌ಪಿ ಅಂಶುಕಮಾರ್ ಮಾತನಾಡಿ, ಹಲ್ಲೆಗೊಳಗಾದವರಿಂದಲೂ ಮಾಹಿತಿ ಪಡೆದು ದೂರು ಸ್ವೀಕರಿಸುತ್ತೇವೆ. ಗಲಾಟೆಗೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಭದ್ರತೆಗೆ 4 ಕೆಎಸ್ಆರ್‌ಪಿ ತುಕಡಿ, 200 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.