newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯಾದ್ಯಂತ ಚುರುಕುಗೊಂಡಿರುವ ಮುಂಗಾರು ಮಾರುತಗಳು ಜುಲೈ ತಿಂಗಳ ಕೊನೆಯವರೆಗೂ ಆರ್ಭಟಿಸಲಿದ್ದು, ಸಾಲು ಸಾಲು ರಜೆ ಹಾಗೂ ವಾರಾಂತ್ಯದ ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ 17 ಪ್ರಮುಖ ಜಿಲ್ಲೆಗಳಿಗೆ ಜುಲೈ 28ರ ವರೆಗೆ ‘ಯೆಲ್ಲೋ ಅಲರ್ಟ್’ ಜಾರಿಗೊಳಿಸಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಗದಗ, ಚಿತ್ರದುರ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಸಮುದ್ರ ಹಾಗೂ ನದಿ ತೀರಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಮೀನುಗಾರರು ಮತ್ತು ಪ್ರವಾಸಿಗರಿಗೆ ಜಾಗರೂಕರಾಗಿರಲು ಹವಾಮಾನ ಕೇಂದ್ರ ಎಚ್ಚರಿಸಿದೆ.
ಇತ್ತ ರಾಜಧಾನಿ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಇತರ ಭಾಗಗಳಲ್ಲಿ ತೀವ್ರ ಮಳೆಯ ಎಚ್ಚರಿಕೆ ಇಲ್ಲವಾದರೂ, ಹಗುರದಿಂದ ಸಾಧಾರಣ ಮಳೆಯಾಗುವ ಜೊತೆಗೆ ತಂಪಾದ ಹವಾಮಾನ ಮುಂದುವರಿಯಲಿದೆ.
ಸತತವಾಗಿ ಸುರಿಯುತ್ತಿರುವ ಈ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ತಡವಾಗಿದ್ದ ಭತ್ತದ ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಮತ್ತೊಂದೆಡೆ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಶಿರಸಿ-ಸಿದ್ದಾಪುರ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ