newsics.com | ನ್ಯೂಸಿಕ್ಸ್
ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಲ್ಲಿ ಹಲವರಿಗೆ ಯಾವುದಾದರೂ ಸಂದರ್ಭದಲ್ಲಿ ತಮ್ಮ ಕಾರ್ಡಿನ ಕ್ರೆಡಿಟ್ ಲಿಮಿಟ್ ಇದ್ದಕ್ಕಿದ್ದಂತೆ ಇಳಿಕೆಯಾಗಿರುವುದು ಅನುಭವಕ್ಕೆ ಬಂದಿರಬಹುದು. ಯಾವುದೇ ಮುನ್ಸೂಚನೆ ಅಥವಾ ಸುಳಿವು ನೀಡದೆ ಬ್ಯಾಂಕುಗಳು ಈ ರೀತಿ ಲಿಮಿಟ್‌ಗೆ ಕತ್ತರಿ ಹಾಕಿರುವುದು ಅಚ್ಚರಿ ಮೂಡಿಸುವುದು ಸಹಜ. ಆದರೆ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಇಂತಹ ಕಠಿಣ ಕ್ರಮ ಕೈಗೊಳ್ಳುವುದರ ಹಿಂದೆ ನಿರ್ದಿಷ್ಟ ಕಾರಣಗಳಿರುತ್ತವೆ, ಹಾಗೂ ಗ್ರಾಹಕರು ತಮ್ಮ ಕಾರ್ಡ್ ಅನ್ನು ನಿರ್ವಹಿಸುವ ವೈಖರಿಯೇ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಮೊದಲನೆಯದಾಗಿ, ಕಾರ್ಡ್ ಬಿಲ್ ಪಾವತಿಯಲ್ಲಿ ಶಿಸ್ತು ಇಲ್ಲದಿರುವುದು. ಮಾಸಿಕ ಬಿಲ್ ಪಾವತಿಯನ್ನು ನಿಗದಿತ ಸಮಯಕ್ಕೆ ಮಾಡದೆ ತಡ ಮಾಡುವುದು ಅಥವಾ ಪ್ರತಿ ಬಾರಿಯೂ ಕೇವಲ ‘ಮಿನಿಮಮ್ ಬ್ಯಾಲೆನ್ಸ್’ (ಕನಿಷ್ಠ ಬಾಕಿ) ಮಾತ್ರ ಪಾವತಿಸುವ ಅಭ್ಯಾಸ ಹೊಂದಿದ್ದರೆ ಬ್ಯಾಂಕುಗಳು ಅಪಾಯವನ್ನು ಗ್ರಹಿಸಿ ಕ್ರೆಡಿಟ್ ಮಿತಿಯನ್ನು ತಕ್ಷಣವೇ ಇಳಿಸುತ್ತವೆ.
ಎರಡನೆಯದಾಗಿ, ಕ್ರೆಡಿಟ್ ಕಾರ್ಡ್ ಅನ್ನು ನಿರಂತರವಾಗಿ ಮತ್ತು ಅತಿಯಾಗಿ ಬಳಸುವುದು ಬ್ಯಾಂಕುಗಳಿಗೆ ನಕಾರಾತ್ಮಕ ಸಂಕೇತವನ್ನು ನೀಡುತ್ತದೆ.
ಮೂರನೆಯದಾಗಿ, ಕಾರ್ಡ್ ಪಡೆದ ನಂತರ ಅದನ್ನು ದೀರ್ಘಕಾಲದವರೆಗೆ ಯಾವುದೇ ವಹಿವಾಟಿಗೆ ಬಳಸದೆ ನಿಷ್ಕ್ರಿಯವಾಗಿಟ್ಟಿದ್ದರೂ ಸಹ ಬ್ಯಾಂಕುಗಳು ಆ ಕ್ರೆಡಿಟ್ ಮಿತಿಯನ್ನು ಕಡಿತಗೊಳಿಸಿ ಮತ್ತೊಬ್ಬರಿಗೆ ಹಂಚಿಕೆ ಮಾಡುವ ಸಾಧ್ಯತೆ ಇರುತ್ತದೆ. ಕೊನೆಯದಾಗಿ, ಸಿಬಿಲ್ (CIBIL) ಅಥವಾ ಕ್ರೆಡಿಟ್ ಸ್ಕೋರ್‌ನಲ್ಲಿ ಕುಸಿತ ಉಂಟಾದಾಗ ಅದು ತಕ್ಷಣವೇ ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಗಳ ಗಮನಕ್ಕೆ ಬರುತ್ತದೆ, ಈ ವೇಳೆ ಸಂಸ್ಥೆಗಳು ಅಪಾಯವನ್ನು ತಪ್ಪಿಸಲು ಕಾರ್ಡಿನ ಲಿಮಿಟ್ ಅನ್ನು ಮರುಪರಿಶೀಲಿಸಿ ಕಡಿಮೆ ಮಾಡುತ್ತವೆ.
ಇಂತಹ ಸಮಸ್ಯೆಗಳಿಂದ ಪಾರಾಗಲು ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಲು ಕೆಲವು ಸರಳ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಪ್ರಮುಖವಾಗಿ, ನಿಮಗೆ ನೀಡಿರುವ ಒಟ್ಟು ಕ್ರೆಡಿಟ್ ಲಿಮಿಟ್‌ನಲ್ಲಿ ಶೇಕಡಾ 30 ಕ್ಕಿಂತ ಹೆಚ್ಚಿನ ಹಣವನ್ನು ಬಳಸದಂತೆ ಜಾಗ್ರತೆ ವಹಿಸಬೇಕು. ಇದರೊಂದಿಗೆ ಪ್ರತಿ ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ಗಡುವಿನ ಒಳಗಾಗಿ ಸಂಪೂರ್ಣವಾಗಿ ಪಾವತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರ್ಥಿಕ ಶಿಸ್ತು ಹೆಚ್ಚುವುದಲ್ಲದೆ ಸಿಬಿಲ್ ಸ್ಕೋರ್ ಕೂಡ ಸುಧಾರಿಸುತ್ತದೆ.
Pan Card ನಿಮ್ಮ ಪ್ರಮುಖ ಪ್ಯಾನ್ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್