newsics.com | ನ್ಯೂಸಿಕ್ಸ್
ಟೆಹ್ರಾನ್: ಜಾಗತಿಕ ತೈಲ ಪೂರೈಕೆಯ ಪ್ರಮುಖ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ಹಾಗೂ ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಡರಾತ್ರಿ ಸಂಭವಿಸಿದ ಸರಣಿ ಸ್ಫೋಟಗಳು ಮತ್ತು ಅಮೆರಿಕದ ಅತ್ಯಾಧುನಿಕ ಡ್ರೋನ್ ಪತನದ ವರದಿಗಳು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೀಡಿರುವ ಮಾಹಿತಿ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಚಲಿಸುತ್ತಿದ್ದ ಎರಡು ಬೃಹತ್ ತೈಲ ಟ್ಯಾಂಕರ್‌ಗಳು ಸಮುದ್ರ ಗಣಿಗಳಿಗೆ (Sea Mines) ಡಿಕ್ಕಿ ಹೊಡೆದು ಸ್ಫೋಟಗೊಂಡಿವೆ. “ಅಮೆರಿಕ ಈ ವಲಯದಲ್ಲಿ ತನ್ನ ಮಿಲಿಟರಿ ಹಸ್ತಕ್ಷೇಪ ಮತ್ತು ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೂ ಹಾರ್ಮುಜ್ ಜಲಸಂಧಿಯು ಯಾವುದೇ ಹಡಗುಗಳ ಸಂಚಾರಕ್ಕೆ ಸುರಕ್ಷಿತವಾಗಿರುವುದಿಲ್ಲ” ಎಂದು ಇರಾನ್ ನೇರ ಎಚ್ಚರಿಕೆ ನೀಡಿದೆ.
ದಾಳಿ-ಪ್ರತಿದಾಳಿಗಳ ನಡುವೆಯೇ ಇರಾನ್ ಮಹತ್ವದ ಯಶಸ್ಸನ್ನು ಘೋಷಿಸಿದೆ. ಪಶ್ಚಿಮ ಇರಾನ್‌ನ ಕೆರ್ಮನ್‌ಶಾ ಪ್ರಾಂತ್ಯದ ವಾಯುಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿದ್ದ ಅಮೆರಿಕದ ಪ್ರಸಿದ್ಧ ‘MQ-9 ರೀಪರ್’ ಡ್ರೋನ್ ಅನ್ನು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ ಹೊಡೆದುರುಳಿಸಲಾಗಿದೆ. IRGC ವಾಯು ರಕ್ಷಣಾ ವ್ಯವಸ್ಥೆಯು ಈ ಡ್ರೋನ್ ಅನ್ನು ಗುರಿಯಾಗಿಸಿ ಹೊಡೆದುರುಳಿಸಿದೆ ಎನ್ನಲಾಗಿದ್ದು, ಈ ಕುರಿತು ಅಮೆರಿಕದಿಂದಿನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಕುವೈತ್‌ನ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಘಟಕ ಮತ್ತು ಸಮುದ್ರ ನೀರನ್ನು ಶುದ್ಧೀಕರಿಸುವ ಉಪ್ಪುನೀರಿನ ಸಂಸ್ಕರಣಾ ಸ್ಥಾವರದ ಮೇಲೆಯೂ ಇರಾನ್ ದಾಳಿ ನಡೆಸಿದೆ ಎಂದು ಕುವೈತ್ ಗಂಭೀರ ಆರೋಪ ಮಾಡಿದೆ. ದಾಳಿಯ ತೀವ್ರತೆಗೆ ಇಡೀ ಸ್ಥಾವರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಪ್ಪು ಹೊಗೆ ಆವರಿಸಿರುವ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇರಾನ್-ಯುಎಸ್ ನಡುವಿನ ಈ ನೇರ ಯುದ್ಧದ ಪರಿಸ್ಥಿತಿಯಿಂದಾಗಿ ಹಾರ್ಮುಜ್ ವಿಶ್ವದ ಅತ್ಯಂತ ಅಪಾಯಕಾರಿ ಸಮುದ್ರ ಮಾರ್ಗವಾಗಿ ಮಾರ್ಪಟ್ಟಿದೆ. ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾ ತೈಲ ಸಾಗಿಸುವ ಹಡಗುಗಳಿಗೆ ಕ್ಷಿಪಣಿ, ಡ್ರೋನ್ ಹಾಗೂ ಸಮುದ್ರ ಗಣಿಗಳ ಬೆದರಿಕೆ ಹೆಚ್ಚಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗುವ ಆತಂಕ ಮೂಡಿಸಿದೆ.
Chardham Yatra Updates | ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ