newsics.com | ನ್ಯೂಸಿಕ್ಸ್
ಬೆಂಗಳೂರು: ಮಳೆಗಾಲ ಆರಂಭವಾಯಿತೆಂದರೆ ಸಿಡಿಲು, ಪ್ರವಾಹಗಳ ಸಮಸ್ಯೆ ಒಂದೆಡೆಯಾದರೆ, ಮನೆಯ ಒಳಗಡೆ ವಿದ್ಯುತ್ ಆಘಾತಗಳು (Electric Shocks) ಹಾಗೂ ಶಾರ್ಟ್ ಸರ್ಕ್ಯೂಟ್ ತೊಂದರೆಗಳು ತೀರಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗೋಡೆಗಳು ಒದ್ದೆಯಾಗುವುದು, ಸ್ವಿಚ್‌ಬೋರ್ಡ್‌ಗಳಿಗೆ ತೇವಾಂಶ ತಗಲುವುದು ಅಥವಾ ಫ್ರಿಡ್ಜ್, ವಾಷಿಂಗ್ ಮಷನ್ ಮತ್ತು ಗೀಸರ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಮುಟ್ಟಿದಾಗ ಕರೆಂಟ್ ಶಾಕ್ ಹೊಡೆಯುವುದು ಈ ದಿನಗಳಲ್ಲಿ ಸಾಮಾನ್ಯ. ಆದರೆ, ಇಂತಹ ವಿಚಾರಗಳಲ್ಲಿ ಮಾಡುವ ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಕಂಟಕ ತರಬಹುದು. ಹಾಗಾಗಿ, ಮಳೆಗಾಲದಲ್ಲಿ ನಿಮ್ಮ ಕುಟುಂಬದ ರಕ್ಷಣೆಗಾಗಿ ತಕ್ಷಣ ಈ ಕೆಳಗಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ.
ಮನೆಯಲ್ಲಿ ಕರೆಂಟ್ ಶಾಕ್ ಹೊಡೆಯಲು ಪ್ರಮುಖ ಕಾರಣಗಳೇನು?
ಮಳೆಯಿಂದಾಗಿ ಮನೆಯ ಗೋಡೆಗಳು ಒದ್ದೆಯಾದಾಗ ಅಥವಾ ಸ್ವಿಚ್‌ಬೋರ್ಡ್‌ಗೆ ನೀರು ತಾಗಿದಾಗ ಅದನ್ನು ಮುಟ್ಟಿದರೆ ತಕ್ಷಣ ಶಾಕ್ ಹೊಡೆಯುತ್ತದೆ. ಮನೆಯಲ್ಲಿ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದರೆ ಅಥವಾ ಇದ್ದರೂ ಅದು ಸರಿಯಾಗಿ ಕೆಲಸ ಮಾಡದಿದ್ದರೆ, ಹೆಚ್ಚುವರಿ ವಿದ್ಯುತ್ ಪ್ರವಾಹವು ನೆಲಕ್ಕೆ ಹೋಗುವ ಬದಲು ಉಪಕರಣಗಳಲ್ಲೇ ಉಳಿದುಕೊಂಡು ಭಾರಿ ಅಪಾಯ ತಂದೊಡ್ಡುತ್ತದೆ. ಒದ್ದೆ ಕೈಯಲ್ಲಿ ಸ್ವಿಚ್ ಒತ್ತುವುದು ಅಥವಾ ಫ್ರಿಡ್ಜ್ ಮುಟ್ಟುವುದರಿಂದಲೂ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ.
ಶಾರ್ಟ್ ಸರ್ಕ್ಯೂಟ್ ತಪ್ಪಿಸಲು ತಜ್ಞರು ನೀಡುವ ಪ್ರಮುಖ ಸಲಹೆಗಳು
- ಅರ್ಥಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಿ: ನಿಮ್ಮ ಮನೆಯ ಅರ್ಥಿಂಗ್ ವ್ಯವಸ್ಥೆ ಸಡಿಲವಾಗಿದ್ದರೆ ತಕ್ಷಣವೇ ನುರಿತ ಎಲೆಕ್ಟ್ರಿಷಿಯನ್ ಕರೆಸಿ ಸರಿಪಡಿಸಿಕೊಳ್ಳಿ ಅಥವಾ ಹೊಸ ಅರ್ಥಿಂಗ್ ಅಳವಡಿಸಿ.
- ಒದ್ದೆ ಕೈಯಲ್ಲಿ ಮುಟ್ಟಬೇಡಿ: ನೀರು ವಿದ್ಯುತ್ ಅನ್ನು ವೇಗವಾಗಿ ಚಲಿಸುವಂತೆ ಮಾಡುವುದರಿಂದ, ಯಾವುದೇ ಕಾರಣಕ್ಕೂ ಒದ್ದೆ ಕೈಯಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮುಟ್ಟಬೇಡಿ.
- ಐಎಸ್‌ಐ (ISI) ಮುದ್ರೆಯಿರುವ ವಸ್ತುಗಳನ್ನೇ ಬಳಸಿ: ಯಾವಾಗಲೂ ಗುಣಮಟ್ಟದ ಐಎಸ್‌ಐ ಗುರುತಿರುವ ವೈರ್ ಹಾಗೂ ಉಪಕರಣಗಳನ್ನು ಬಳಸಿ. ವೈರಿಂಗ್‌ನಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಅಂತಹ ಉಪಕರಣಗಳನ್ನು ಬಳಸುವುದನ್ನು ನಿಲ್ಲಿಸಿ.
- ಪ್ಲಗ್ ಬಳಸುವಾಗ ಎಚ್ಚರ: ಸಾಕೆಟ್‌ಗೆ ಪ್ಲಗ್ ಹಾಕಿದ ನಂತರವೇ ಸ್ವಿಚ್ ಆನ್ ಮಾಡಿ. ಅನ್‌ಪ್ಲಗ್ ಮಾಡುವಾಗ ವೈರ್ ಹಿಡಿದು ಜಗ್ಗಬೇಡಿ, ಪ್ಲಗ್ ಹಿಡಿದೇ ಕನೆಕ್ಷನ್ ಕಡಿತಗೊಳಿಸಿ. ಮಕ್ಕಳ ಕೈಗೆ ಸಿಗದಂತೆ ಸಾಕೆಟ್ ಬೋರ್ಡ್‌ಗಳನ್ನು ಮುಚ್ಚಿಡಿ.
- ಸೇಫ್ಟಿ ಪ್ಲಗ್ ಹಾಗೂ ಚಪ್ಪಲಿ ಬಳಸಿ: ಗೀಸರ್, ಫ್ರಿಡ್ಜ್, ವಾಷಿಂಗ್ ಮಷಿನ್‌ಗಳಿಗೆ ಸೇಫ್ಟಿ ಪ್ಲಗ್ ಬಳಸಿ. ಯಾವುದೇ ಎಲೆಕ್ಟ್ರಾನಿಕ್ ಸಾಧನ ಬಳಸುವಾಗ ಕಾಲಿಗೆ ಒಣ ಚಪ್ಪಲಿ ಅಥವಾ ರಬ್ಬರ್ ಬೂಟುಗಳನ್ನು ಧರಿಸಿ. ರಿಪೇರಿ ಮಾಡುವಾಗ ರಬ್ಬರ್ ಗ್ಲಾವ್ಸ್ ಧರಿಸುವುದು ಕಡ್ಡಾಯ.
- ನೀರಿನಿಂದ ದೂರವಿಡಿ: ನಲ್ಲಿಗಳು ಅಥವಾ ನೀರಿನ ಮೂಲಗಳ ಪಕ್ಕದಲ್ಲಿ ಯಾವುದೇ ಎಲೆಕ್ಟ್ರಿಕಲ್ ಉಪಕರಣಗಳನ್ನು ಇಡಬೇಡಿ.
Vastu Tips: ಮನೆಯ ಗೋಡೆಯ ಮೇಲೆ ಈ ಪೇಂಟಿಂಗ್ ಇದ್ದರೆ ಅದೃಷ್ಟ ನಿಮ್ಮದಾಗಬಹುದು!