newsics.com | ನ್ಯೂಸಿಕ್ಸ್
ನವದೆಹಲಿ: ಮಹಿಳೆಯ ಸಲ್ವಾರ್ ಎಳೆಯಲು ಯತ್ನಿಸುವುದು ಮತ್ತು ಎದೆಯನ್ನು ಮುಟ್ಟುವುದು “ಅತ್ಯಾಚಾರ ಯತ್ನ” ಎಂದು ಒಪ್ಪಲು ಸಾಧ್ಯವಿಲ್ಲ ಎನ್ನುವ ಪಾಟ್ನಾ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವ ಮುನ್ನ ನ್ಯಾಯಾಧೀಶರಿಗೆ ಕನಿಷ್ಠ ಕಾನೂನು ಅಧ್ಯಯನ ಮತ್ತು ಸಂವೇದನಾಶೀಲತೆ ಇರಬೇಕು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಹಿರಿಯ ವಕೀಲರಾದ ಶೋಭಾ ಗುಪ್ತಾ ಅವರು ಹೈಕೋರ್ಟ್‌ನ ಈ ವಿಲಕ್ಷಣ ಆದೇಶವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಾಗ ನ್ಯಾಯಾಲಯವು ಈ ಪ್ರತಿಕ್ರಿಯೆ ನೀಡಿದೆ.
ಈ ವೇಳೆ ಅಸಮಾಧಾನ ಹೊರಹಾಕಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ಇತ್ತೀಚಿನ ದಿನಗಳಲ್ಲಿ ಇಂತಹ ಮಹತ್ವದ ತೀರ್ಪುಗಳನ್ನು ಕೊಡುವ ಮುನ್ನ ಸರಿಯಾದ ಸಂಶೋಧನೆಗಳೇ ನಡೆಯುತ್ತಿಲ್ಲ. ಇಲಾಖೆಯ ಸಿಬ್ಬಂದಿಯೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ” ಎಂದರಲ್ಲದೆ, ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಕೋರ್ಟ್ ಮತ್ತು ಪೊಲೀಸರಿಗೆ ಹೊಸ ರೂಲ್ಸ್
ಇದೇ ವೇಳೆ ಲೈಂಗಿಕ ಅಪರಾಧಗಳ ತನಿಖೆ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
- ನ್ಯಾಯಾಲಯಗಳಿಗೆ ಕಡ್ಡಾಯ: ದೇಶದ ಎಲ್ಲಾ ಕೋರ್ಟ್‌ಗಳು ಇಂತಹ ಕೇಸ್‌ಗಳ ವಿಚಾರಣೆ ನಡೆಸುವಾಗ ಮತ್ತು ತೀರ್ಪು ಬರೆಯುವಾಗ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಸಿದ್ಧಪಡಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು.
- ಪೊಲೀಸರಿಗೂ ಅನ್ವಯ: ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಾಗ ಹಾಗೂ ಚಾರ್ಜ್‌ಶೀಟ್ ಸಲ್ಲಿಸುವಾಗ ಪೊಲೀಸರು ಕೂಡ ಇದೇ ಮಾರ್ಗಸೂಚಿಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.
ಏನಿದು ವಿವಾದಾತ್ಮಕ ಕೇಸ್?
2008 ರಲ್ಲಿ ಬಿಹಾರದ ಫೋಟೋ ಸ್ಟುಡಿಯೋ ಒಂದರಲ್ಲಿ ಯುವತಿಯೊಬ್ಬಳ ತಂದೆಯನ್ನು ಹೊರಗೆ ಕಳುಹಿಸಿ, ಮಾಲೀಕ ಒಳಗಿನಿಂದ ಬಾಗಿಲು ಹಾಕಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದನು. ಈ ಕೇಸ್‌ನಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಪಾಟ್ನಾ ಹೈಕೋರ್ಟ್ ಅತ್ಯಾಚಾರಕ್ಕೆ ನೇರ ಯತ್ನ ನಡೆದಿದೆ ಎಂದು ತೋರಿಸಲು ಬಲವಾದ ಪುರಾವೆಗಳಿಲ್ಲ ಎಂದು ಹೇಳಿತ್ತು. ಅಲ್ಲದೆ, ಬಟ್ಟೆ ಎಳೆಯಲು ಯತ್ನಿಸುವುದು ಹಾಗೂ ಎದೆ ಮುಟ್ಟುವುದು ಅತ್ಯಾಚಾರ ಯತ್ನ ಎನ್ನಲು ಬರುವುದಿಲ್ಲ ಎಂದು ಹೇಳಿ ಆರೋಪಿಯನ್ನು ಬಿಡುಗಡೆ ಮಾಡಿತ್ತು.
ಹೈಕೋರ್ಟ್‌ನ ಈ ವಿಚಿತ್ರ ವಾದಕ್ಕೆ ಈಗ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದ್ದು, ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ https://www.newsics.com/2026/07/15/irctc-new-website-railway-ticket-bookin/