newsics.com | ನ್ಯೂಸಿಕ್ಸ್
ಬೆಂಗಳೂರು: ದೇಶದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಗ್ಯಾಸ್ ಸಂಪರ್ಕ ವರ್ಗಾವಣೆ, ಹೊಸ ಕನೆಕ್ಷನ್ ಮತ್ತು ಮರು ಬುಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಹಾಗೂ ಪಾರದರ್ಶಕಗೊಳಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ, ಈ ಹೊಸ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ಗ್ರಾಹಕರು ಭವಿಷ್ಯದಲ್ಲಿ ಗ್ಯಾಸ್ ಸಿಲಿಂಡರ್ ಸಿಗದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಮುಖ್ಯವಾಗಿ ಎಲ್‌ಪಿಜಿಯಿಂದ ಪಿಎನ್‌ಜಿ (PNG – ಪೈಪ್‌ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕಕ್ಕೆ ಬದಲಾಗುವ ಗ್ರಾಹಕರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಪಿಎನ್‌ಜಿ (PNG) ಸಂಪರ್ಕವಿದ್ದರೆ 30 ದಿನಗಳ ಗಡುವು
ಒಂದೇ ಮನೆಯಲ್ಲಿ ಎರಡು ರೀತಿಯ ಗ್ಯಾಸ್ ವ್ಯವಸ್ಥೆಗಳ ಅನಗತ್ಯ ಬಳಕೆಯನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ನಿಯಮ ತಂದಿದೆ. ಅದರಂತೆ, ನಿಮ್ಮ ಮನೆಗೆ ಪೈಪ್ ಲೈನ್ (PNG) ಗ್ಯಾಸ್ ಸಂಪರ್ಕ ಕಲ್ಪಿಸಿದ 30 ದಿನಗಳ ಒಳಗಾಗಿ ನಿಮ್ಮಲ್ಲಿರುವ ಹಳೆಯ ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು ಕಡಿತಗೊಳಿಸುವುದು ಕಡ್ಡಾಯವಾಗಿದೆ. ಈಗಾಗಲೇ ಈ 30 ದಿನಗಳ ಅವಧಿ ಮುಗಿದಿದ್ದು, ತಕ್ಷಣವೇ ಎಲ್‌ಪಿಜಿ ಸರೆಂಡರ್ ಮಾಡದಿದ್ದರೆ ಗ್ರಾಹಕರು ಕಾನೂನು ತೊಂದರೆ ಎದುರಿಸಬೇಕಾಗಬಹುದು.
ಮನೆ ಬದಲಾಯಿಸುವಾಗ ಗ್ಯಾಸ್ ವರ್ಗಾವಣೆ ಹೇಗೆ?
ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಇಂಡೇನ್, ಎಚ್‌ಪಿ ಅಥವಾ ಭಾರತ್ ಗ್ಯಾಸ್ ಏಜೆನ್ಸಿಗಳ ಮೂಲಕ ನಿಮ್ಮ ಕನೆಕ್ಷನ್ ವರ್ಗಾಯಿಸಿಕೊಳ್ಳಲು ಈ ನಿಯಮಗಳನ್ನು ಪಾಲಿಸಿ.
- ಒಂದೇ ಪ್ರದೇಶದಲ್ಲಿದ್ದರೆ (Same Area): ಹೊಸ ಮನೆ ಪ್ರಸ್ತುತ ಇರುವ ಗ್ಯಾಸ್ ಏಜೆನ್ಸಿಯ ವ್ಯಾಪ್ತಿಯಲ್ಲೇ ಬಂದರೆ ಪ್ರಕ್ರಿಯೆ ಸುಲಭ. ನಿಮ್ಮ ಹೊಸ ವಿಳಾಸದ ದಾಖಲೆ ನೀಡಿದರೆ ಏಜೆನ್ಸಿಯವರು ಅಪ್ಡೇಟ್ ಮಾಡಿಕೊಡುತ್ತಾರೆ.
- ಬೇರೆ ಪ್ರದೇಶಕ್ಕೆ ಹೋದರೆ (Different Area): ನಿಮ್ಮ ಹಾಲಿ ಏಜೆನ್ಸಿಯ ವ್ಯಾಪ್ತಿಯಿಂದ ಹೊರಗೆ ಹೋದರೆ, ಮೊದಲು ವಿತರಕರಿಂದ ‘ವರ್ಗಾವಣೆ ಮುಕ್ತಾಯ ವೋಚರ್’ (TTV) ಪಡೆದುಕೊಳ್ಳಬೇಕು. ಇದನ್ನು ಹೊಸ ಪ್ರದೇಶದ ಗ್ಯಾಸ್ ಏಜೆನ್ಸಿಗೆ ಸಲ್ಲಿಸಿ ಸಂಪರ್ಕವನ್ನು ಸಕ್ರಿಯಗೊಳಿಸಬಹುದು.
- ಬೇರೆ ನಗರಕ್ಕೆ ಸ್ಥಳಾಂತರಗೊಂಡರೆ (Other City): ಈ ಸಂದರ್ಭದಲ್ಲಿ ಹಳೆಯ ಏಜೆನ್ಸಿಗೆ ಸಿಲಿಂಡರ್ ಮತ್ತು ರೆಗ್ಯುಲೇಟರ್ ಒಪ್ಪಿಸಬೇಕು. ಆಗ ಏಜೆನ್ಸಿಯವರು ನಿಮಗೆ ‘ಟರ್ಮಿನೇಷನ್ ವೋಚರ್’ ನೀಡಿ, ನಿಮ್ಮ ಭದ್ರತಾ ಠೇವಣಿಯನ್ನು (Security Deposit) ಮರಳಿ ನೀಡುತ್ತಾರೆ. ಹೊಸ ನಗರದ ಏಜೆನ್ಸಿ ಈ ವೋಚರ್ ಅನ್ನು ‘ವರ್ಗಾವಣೆ ಚಂದಾದಾರಿಕೆ ವೋಚರ್’ (TSV) ಆಗಿ ಪರಿವರ್ತಿಸಿ ಹೊಸ ಗ್ರಾಹಕ ಸಂಖ್ಯೆ ನೀಡುತ್ತದೆ.
ವರ್ಗಾವಣೆಗೆ ಬೇಕಾಗುವ ಅಗತ್ಯ ದಾಖಲೆಗಳು
- ಗ್ರಾಹಕರ ಗುರುತಿನ ಚೀಟಿ (ID Proof)
- ಹೊಸ ನಿವಾಸದ ವಿಳಾಸದ ಪುರಾವೆ (Address Proof)
- ಗ್ಯಾಸ್ ಪಾಸ್‌ಬುಕ್ ಅಥವಾ ಕಸ್ಟಮರ್ ಕಾರ್ಡ್
- ಗ್ಯಾಸ್ ಸಂಪರ್ಕದ ಮೂಲ ವೋಚರ್ (Original Voucher)
ಗ್ಯಾಸ್ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಮುನ್ನ ನಿಮ್ಮ ಸ್ಥಳೀಯ ವಿತರಕರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆಯಿರಿ. ಹಾಗೆಯೇ ವರ್ಗಾವಣೆ ಸಮಯದಲ್ಲಿ ಸಿಗುವ ಎಲ್ಲಾ ವೋಚರ್ ಮತ್ತು ರಸೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.