newsics.com| ನ್ಯೂಸಿಕ್ಸ್
ಬೆಂಗಳೂರು: ಜಿಮ್ ತರಬೇತುದಾರ ಆಗಿದ್ದ ವಿಜಯಕುಮಾರ್ ಕೊಲೆ ಪ್ರಕರಣದಲ್ಲಿ ಸುಪಾರಿ ಕೊಲೆಗಾರರಿಗೆ ಹಣ ಸಂದಾಯ ಮಾಡಿದ ಆಪಾದನೆಯಡಿ ಏಳನೇ ಆರೋಪಿಯಾಗಿರುವ ವಕೀಲ ಬಿ.ಲೋಕೇಶ್ ವಿರುದ್ಧದ ಪ್ರಕರಣಕ್ಕೆ ನೀಡಿದ್ದ ತಡೆ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ.
ಪ್ರಕರಣದಿಂದ ನನ್ನನ್ನು ಕೈಬಿಡಲು ಆದೇಶಿಸಬೇಕು ಎಂದು ಕೋರಿ ವಕೀಲ ಬಿ.ಲೋಕೇಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಈ ಪ್ರಕರಣದಲ್ಲಿ ಅರ್ಜಿದಾರರಿಗೆ ರಕ್ಷಣೆ ಒದಗಿಸಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ನುಡಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಡಿ.ಆರ್.ರವಿಶಂಕರ್, ‘ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ರಕ್ಷಣೆ ಮುಂದುವರಿಸಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಲೋಕೇಶ್ ಮತ್ತು ಇತರೆ ಆರೋಪಿಗಳ ನಡುವಿನ ಹಣ ವರ್ಗಾವಣೆ ಕುರಿತು ಪ್ರಶ್ನಿಸಿದರಲ್ಲದೆ, ‘ಒಂದರಿಂದ ಐದನೇ ಆರೋಪಿಗಳು ಸುಪಾರಿ ಕೊಲೆಗಾರರು ಎಂದು ಪರಿಗಣಿತವಾಗಿರುವಾಗ ವಕೀಲರ ಖಾತೆಯಿಂದ ಇತರ ಆರೋಪಿಗಳ ಖಾತೆಗೆ ಹಣ ಹೇಗೆ ಹೋಗುತ್ತದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಇದೇ 6ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಿತ್ತು. ಗುರುವಾರ ಪ್ರಾಸಿಕ್ಯೂಷನ್ ಪರ ಹಾಜರಾಗಿದ್ದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದು ತುರ್ತು ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ‘ಇದೊಂದು ಕೊಲೆ ಪ್ರಕರಣ. ಇದರಲ್ಲಿ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಆದೇಶ ಮಾಡುವುದಿಲ್ಲ. ಅಷ್ಟಕ್ಕೂ, ‘ಲೋಕೇಶ್ ಅವರು ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಮಂಜುರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವುದು ಸೂಕ್ತ’ ಎಂದು ಅರ್ಜಿ ವಿಲೇವಾರಿ ಮಾಡಿದರು.