newsics.com| ನ್ಯೂಸಿಕ್ಸ್
ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (SIR) ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿ ನೇತೃತ್ವದ ಮೈತ್ರಿ ನಿಯೋಗವು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ. ಬಳಿಕ ದೆಹಲಿಯಲ್ಲಿಯೇ ಮೈತ್ರಿ ನಾಯಕರು ಸುದ್ದಿಗೋಷ್ಠಿಯನ್ನೂ ನಡೆಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಎಸ್ಐಆರ್ ಬಗ್ಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮೊದಲು ವಿರೋಧ ಮಾಡಿತ್ತು. ಈಗ ಅವರೇ ಅದನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಮನೆ ಮನೆಗೆ ಹೋಗಿ ಮತಪಟ್ಟಿ ಪರಿಷ್ಕರಣೆ ಮಾಡಬೇಕೆಂಬ ಬಗ್ಗೆ ಸ್ಪಷ್ಟವಾಗಿ ಚುನಾವಣಾ ಆಯೋಗದ ನಿಮಯವಿದೆ. ಆದರೆ ಕರ್ನಾಟಕದಲ್ಲಿ ಮಸೀದಿ, ದರ್ಗಾ, ಸಮುದಾಯ ಭವನಗಳಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರಿದ್ದಾರೆ.
ರಾಜ್ಯ ಸರ್ಕಾರದ ಕೈಕೆಳಗಿರುವ ಅಧಿಕಾರಿಗಳ ಬಳಸಿಕೊಂಡು ಅಕ್ರಮ ಮಾಡಲಾಗುತ್ತಿದ್ದು, ನಕಲಿ ಮತಗಳನ್ನು ಸೃಷ್ಟಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಗ್ಯಾರಂಟಿ ಕಡಿತಗೊಳ್ಳುವ ಭಯ ಹುಟ್ಟಿಸಿ ಜನರನ್ನು ಅನಗತ್ಯ ಗಾಬರಿಪಡಿಸಲಾಗುತ್ತಿದೆ. ಈ ಬಗ್ಗೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಎರಡೂ ಪಕ್ಷಗಳಿಂದ ಮನವಿ ಪತ್ರ ನೀಡಿದ್ದೇವೆ. ಕೂಲಂಕಷವಾಗಿ ಪರಿಶೀಲನೆ ಮಾಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ ಎಂದವರು ಹೇಳಿದ್ದಾರೆ.
ಎಸ್ಐಆರ್ನಲ್ಲಿ ಬಾಂಗ್ಲಾದವರ ಹೆಸರು ಸೇರಿಸುವ ಕೆಲಸ ಆಗುತ್ತಿದ್ದು, ಕಾಂಗ್ರೆಸ್ನವರು ಹಾದಿಬೀದಿಯಲ್ಲಿ ಫಾರಂ ಹಂಚುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ದೇಶವನ್ನು ಅಪಾಯಕ್ಕೆ ಸಿಲುಕಿಸುವ ಕೆಲಸವಾಗ್ತಿದೆ. ನಾವು ಅಕ್ರಮಗಳನ್ನು ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದವರು ಕಿಡಿ ಕಾರಿದ್ದಾರೆ. ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯಾ ಎಂಬ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಆಗಬೇಕು ಎಂದೂ ಒತ್ತಾಯಿಸಿರುವ ಅಶೋಕ್, ಬೇರೆ ರಾಜ್ಯದ ಅಧಿಕಾರಿಗಳನ್ನು ಹಾಕಿ ಮತಪಟ್ಟಿ ಪರಿಷ್ಕರಣೆ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ ಸಂಬಂಧ ದಾಖಲೆ ಸಮೇತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಬಿಜೆಪಿ, ಜೆಡಿಎಸ್ ನಿಯೋಗ ದೂರು ಸಲ್ಲಿಕೆ ಮಾಡಿದೆ. ಕೇಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಉಪ ನಾಯಕ ಅರವಿಂದ್ ಬೆಲ್ಲದ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಲ್ಪಿ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.
Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ