newsics.com | ನ್ಯೂಸಿಕ್ಸ್
ಪ್ರತಿಯೊಬ್ಬರ ಲೈಫ್‌ನಲ್ಲೂ ಒಂದಲ್ಲಾ ಒಂದು ವೀಕ್‌ನೆಸ್ ಇದ್ದೇ ಇರುತ್ತೆ. ಕೆಲವರಿಗೆ ಕತ್ತಲಲ್ಲಿ ಒಬ್ಬರೇ ಇರಲು ಭಯ ಇರುತ್ತದೆ, ಇನ್ನು ಕೆಲವರಿಗೆ ನೀರು ಅಥವಾ ಹಾವನ್ನು ಕಂಡರೆ ಭಯವಿರುತ್ತದೆ. ಆದರೆ, ಬಹುತೇಕ ಮನೆಗಳಲ್ಲಿ ದಿನ ಬೆಳಗಾದರೆ ಸಿಗುವ ಕಾಮನ್ ಸೀನ್ ಅಂದರೆ ಜಿರಳೆ ಕಂಡು ಮಹಿಳೆಯರು ಜೋರಾಗಿ ಕಿರುಚಿ ಓಡುವುದು. ಗಾತ್ರದಲ್ಲಿ ಚೋಟುದ್ದ ಇರುವ ಈ ಕೀಟವನ್ನು ನೋಡಿದರೆ ಹೆಣ್ಣುಮಕ್ಕಳಿಗೆ ಯಾಕಿಷ್ಟು ಭಯ ಪಡುತ್ತಾರೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಮತ್ತು ವಿಜ್ಞಾನದ ರಹಸ್ಯ ಇಲ್ಲಿದೆ.
ಏನಿದು ‘ಜಿರಳೆ ಫೋಬಿಯಾ’?
ಮನೋವಿಜ್ಞಾನ ಲೋಕದಲ್ಲಿ ಜಿರಳೆಗಳನ್ನು ನೋಡಿ ಅತಿಯಾಗಿ ಆತಂಕಕ್ಕೊಳಗಾಗುವುದಕ್ಕೆ ‘ಕತ್ಸರಿಡಾಫೋಬಿಯಾ’ (Katsaridaphobia) ಎಂಬ ಹೆಸರಿದೆ. ಇದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುವ ಒಂದು ಸಾಮಾನ್ಯ ಫೋಬಿಯಾವಾಗಿದೆ. ಈ ಸಮಸ್ಯೆ ಇರುವವರ ಕಣ್ಣಿಗೆ ಜಿರಳೆ ಬಿದ್ದ ತಕ್ಷಣ ಮೆದುಳು ಅಪಾಯದ ಸಿಗ್ನಲ್ ನೀಡುತ್ತದೆ. ಪರಿಣಾಮವಾಗಿ ಕೈಕಾಲುಗಳು ಐಸ್‌ನಂತೆ ತಣ್ಣಗಾಗುವುದು, ವಿಪರೀತ ಬೆವರು ಸುರಿಯುವುದು, ಹಾರ್ಟ್ ಬೀಟ್ ಜೋರಾಗುವುದು ಹಾಗೂ ಕ್ಷಣಕಾಲ ಮತಿಯೇ ಗೆಟ್ಟಂತಾಗುವ ಲಕ್ಷಣಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ.
ಮನಶ್ಶಾಸ್ತ್ರಜ್ಞರ ಪ್ರಕಾರ, ಈ ಭಯದ ಜರ್ನಿ ಶುರುವಾಗುವುದೇ ನಮ್ಮ ಚಿಕ್ಕ ವಯಸ್ಸಿನಲ್ಲಿ. ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರು ಅಥವಾ ಹಿರಿಯರ ರಿಯಾಕ್ಷನ್ ನೋಡಿಯೇ ವಿಷಯಗಳನ್ನು ಕಲಿಯುತ್ತಾರೆ. ಬಾಲ್ಯದಲ್ಲಿ ಅಮ್ಮ ಅಥವಾ ಮನೆಯ ಅಕ್ಕ ಜಿರಳೆಯನ್ನು ನೋಡಿ ಕಿರುಚಿದ್ದನ್ನು ಗಮನಿಸಿದ ಮಗುವಿನ ಮನಸ್ಸಿನಲ್ಲಿ, “ಇದು ತುಂಬಾ ಡೇಂಜರಸ್ ಪ್ರಾಣಿ” ಎಂಬ ತಪ್ಪು ಕಲ್ಪನೆ ಮೂಡುತ್ತದೆ. ವಯಸ್ಸಾಗುತ್ತಾ ಹೋದಂತೆ ಇದೇ ಕಲ್ಪನೆ ದೊಡ್ಡ ಫೋಬಿಯಾವಾಗಿ ಬದಲಾಗುತ್ತದೆ.
ಹುಡುಗಿಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳಲು ನಮ್ಮ ಸಾಮಾಜಿಕ ಪರಿಸರವೂ ಕಾರಣ. ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಅಚ್ಚುಕಟ್ಟು ಹಾಗೂ ಸ್ವಚ್ಛತೆಯ ಪಾಠಗಳನ್ನು ಹೆಚ್ಚು ಮಾಡಲಾಗುತ್ತದೆ. ಜಿರಳೆಗಳು ಯಾವಾಗಲೂ ಗಲೀಜು ಜಾಗ, ಗಟಾರ ಅಥವಾ ಸಿಂಕ್‌ಗಳಲ್ಲೇ ವಾಸಿಸುವುದರಿಂದ, ಅವುಗಳನ್ನು ಕಂಡ ತಕ್ಷಣ ಮಹಿಳೆಯರಲ್ಲಿ ಅಸಹ್ಯ ಮತ್ತು ಭಯ ಒಟ್ಟಿಗೇ ಆವರಿಸುತ್ತದೆ.
ಜಿರಳೆಗಳ ವಿಚಿತ್ರ ಶಾರೀರಿಕ ರಚನೆಯೂ ಜನರ ಭಯವನ್ನು ಡಬಲ್ ಮಾಡುತ್ತದೆ. ಅವುಗಳ ಮೈ ಮೇಲಿರುವ ಜಿಡ್ಡು ಜಿಡ್ಡಾದ ಚರ್ಮ, ಅತಿ ವೇಗವಾಗಿ ಓಡುವ ಸ್ಟೈಲ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅನಿರೀಕ್ಷಿತವಾಗಿ ರೆಕ್ಕೆ ಬಿಚ್ಚಿ ಮೈಮೇಲೆ ಬಂದು ಕೂರುವ ವಿಚಿತ್ರ ಬುದ್ಧಿ ಯಾರಿಗಾದರೂ ದಿಗಿಲು ಹುಟ್ಟಿಸುತ್ತದೆ. ಈ ಸಡನ್ ಅಟ್ಯಾಕ್ ಮಾಡುವ ಗುಣವೇ ಜನರ ಉಪಪ್ರಜ್ಞೆ ಮನಸ್ಸಿನಲ್ಲಿ ಸದಾ ಆತಂಕ ಸೃಷ್ಟಿಸಿಡುತ್ತದೆ.
ಜಿರಳೆಗಳು ಕಚ್ಚದೇ ಇದ್ದರೂ, ರೋಗಕಾರಕ ಬ್ಯಾಕ್ಟೀರಿಯಾಗಳ ದೊಡ್ಡ ಸೈನ್ಯವನ್ನೇ ಹೊತ್ತು ತಿರುಗುತ್ತವೆ. ಕೊಳಚೆ ಪ್ರದೇಶಗಳಲ್ಲಿ ಓಡಾಡುವುದರಿಂದ ಇವುಗಳ ಮೈಮೇಲೆ ಅಸ್ತಮಾ ಮತ್ತು ಅಲರ್ಜಿ ತರಬಲ್ಲ ಸೂಕ್ಷ್ಮಜೀವಿಗಳು ಹೆಚ್ಚಿರುತ್ತವೆ. ಇದರಿಂದಾಗಿ ನಮ್ಮ ಸಬ್‌ಕಾನ್ಶಿಯಸ್ ಮೈಂಡ್ ಜಿರಳೆಯನ್ನು ಒಂದು ‘ಅನಾರೋಗ್ಯದ ಸಂಕೇತ’ ಎಂದು ಮೊದಲೇ ಫಿಕ್ಸ್ ಮಾಡಿಬಿಟ್ಟಿರುತ್ತದೆ.
Rain alert ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ: ಉತ್ತರ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ