newsics.com| ನ್ಯೂಸಿಕ್ಸ್
ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಂಬಂಧಗಳು ರೂಪುಗೊಳ್ಳುತ್ತಿವೆ, ಅದೇ ರೀತಿ ಹಾಳಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲೇ ಒಬ್ಬರನೊಬ್ಬರು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಳ್ಳುವುದು, ಪ್ರೀತಿ ಮಾಡೋದು, ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಪರಿಚಯ ಪ್ರೀತಿಗೆ ತಿರುಗಿ, ನಂತರ ಮದುವೆ ತನಕ ಹೋಗಿ ಆಮೇಲೆ ದುರಂತ ಅಂತ್ಯ ಕಂಡಿದೆ.
ಹೌದು, ರಾಜ್‌ಕೋಟ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬೆಸೆದ ಸಂಬಂಧ ಭಯಾನಕ ಕೊಲೆಗೆ ಕಾರಣವಾಗಿದೆ. 20 ವರ್ಷದ ಪಿಯೂಷ್ ಕುಮಾರ್ ಖರ್ವಾರ್ ಎಂಬ ಯುವಕ ತನ್ನ ಜೊತೆಗೆ ಹುಡುಗಿಯಂತೆ ನಟಿಸಿದ ವ್ಯಕ್ತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹುಡುಗಿ ವೇಷ, ನಂತರ ಲವ್!
ಪಿಯೂಷ್ ಕುಮಾರ್ ಖರ್ವಾರ್ ಫೇಸ್‌ಬುಕ್‌ನಲ್ಲಿ ‘ನಿಶಾ ಕುಮಾರ್’ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ‘ಪೂನಂ’ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದ. ಆ ವ್ಯಕ್ತಿ ತಾನು ಹುಡುಗಿಯಂತೆ ನಟಿಸಿ ಪಿಯೂಷ್‌ನ ವಿಶ್ವಾಸ ಗಳಿಸಿದ್ದ. ಆದರೆ ಈತನ ನಿಜವಾದ ಹೆಸರು ಚಂದನ್ ಕುಮಾರ್. ಈ ಚಂದನ್ ಪಿಯೂಷ್ ನನ್ನು ಪ್ರೀತಿಸಿ ಮದುವೆಯಾಗುದವುದಾಗಿ ನಂಬಿಸಿದ್ದ. ಪಿಯೂಷ್ ಕೂಡ ಚಂದನ್ ಅವರನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ್ದ.
ಒಂದು ದಿನ ಪಿಯೂಷ್ ಚಂದನ್ ಕ್ಷೌರ ಮಾಡುವುದನ್ನು ನೋಡಿದಾಗ ಸತ್ಯ ತಿಳಿದುಬಂದಿದೆ. ಚಂದನ್ ವಾಸ್ತವವಾಗಿ ಹುಡುಗ ಎಂದು ಅರಿತುಕೊಂಡ, ನಂತರ ಪಿಯೂಷ್ ಮತ್ತು ಚಂದನ್ ಮಧ್ಯೆ ಜಗಳ ತಾರಕಕ್ಕೇರಿದೆ. ಪಿಯೂಷ್ ಚಂದನ್ ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಚಂದನ್ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಮೂಲಕ ಪಿಯೂಷ್ ನನ್ನು ಹಿಂಬಾಲಿಸಿ ರಾಜ್‌ಕೋಟ್‌ನ ಪಡ್ವಾಲಾದಲ್ಲಿರುವ ಕಾರ್ಖಾನೆಯನ್ನು ತಲುಪಿದ್ದ.
ಜೂನ್ 21 ರಂದು ಕೆಲಸದ ಸ್ಥಳದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ನಂತರ ಪಿಯೂಷ್ ಚಂದನ್ ರನ್ನು ರೈಲ್ವೆ ಹಳಿಗಳ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ದೊಡ್ಡ ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ. ಶವವನ್ನು ಕಲ್ಲುಗಳ ಕೆಳಗೆ ಮರೆಮಾಡಿ ತನ್ನ ಕೆಲಸಕ್ಕೆ ಮರಳಿದ್ದಾನೆ.
ಜೂನ್ 25 ರಂದು ಮಸ್ಕತ್ ಗೇಟ್ ರೈಲ್ವೆ ಗೋಡೆಯ ಬಳಿ ಮಹಿಳೆಯರ ಬಟ್ಟೆಗಳನ್ನು ಧರಿಸಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪೊಲೀಸರಿಗೆ ಸಿಕ್ಕಿತು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ಗಂಭೀರವಾದ ಗಾಯಗಳಾಗಿದ್ದು ಗೊತ್ತಾಗಿದೆ. ನಂತರ ಅಧಿಕಾರಿಗಳು ಇದನ್ನು ಕೊಲೆ ಪ್ರಕರಣವೆಂದು ಮರುತನಿಖೆ ನಡೆಸಿದರು.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆರೋಪಿ!
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಭೂ ಗುಪ್ತಚರವನ್ನು ಬಳಸಿದರು. ಅಂತಿಮವಾಗಿ ಅವರು 20 ವರ್ಷದ ಪಿಯೂಷ್ ಕುಮಾರ್ ಖರ್ವಾರ್ ಅವರನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಿಂಗ್ ಗುರ್ಜರ್ ಅವರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.