newsics.com | ನ್ಯೂಸಿಕ್ಸ್
ಮನಾಮ: ಇರಾನ್ ದೇಶದ ಜೊತೆಗಿನ ಮಿಲಿಟರಿ ಉದ್ವಿಗ್ನತೆಯ ನಡುವೆಯೇ, ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಗೆ (US Navy) ಸೇರಿದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಒಂದು ತುರ್ತು ಪರಿಸ್ಥಿತಿಯಿಂದಾಗಿ ಸಮುದ್ರದ ನೀರಿನ ಮೇಲೆಯೇ ಲ್ಯಾಂಡಿಂಗ್ ಆಗಿದೆ. ಹೆಲಿಕಾಪ್ಟರ್ನಲ್ಲಿದ್ದ ನಾಲ್ವರು ಸೈನಿಕರ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ವಿಶ್ವದ ಅತ್ಯಂತ ಪ್ರಭಾವಿ ಯುದ್ಧನೌಕೆ ‘ಯುಎಸ್ಎಸ್ ಜಾರ್ಜ್ ಎಚ್.ಡಬ್ಲ್ಯೂ ಬುಷ್’ಗೆ ಸೇರಿದ ‘MH-60S ಸೀ ಹಾಕ್’ ಹೆಲಿಕಾಪ್ಟರ್ ಮುಂಜಾನೆ 3:3o ಗಂಟೆಯ ಸುಮಾರಿಗೆ ನಿಯಂತ್ರಣ ಕಳೆದುಕೊಂಡಿದೆ. ಪೈಲಟ್ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಸಮುದ್ರದ ನೀರಿನ ಮೇಲೆಯೇ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣವೇ ಅಲರ್ಟ್ ಆದ ನೌಕಾಪಡೆಯ ರಕ್ಷಣಾ ದಳವು ಮೂವರು ಸೈನಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಮುಖ್ಯ ಹಡಗಿಗೆ ಕರೆತಂದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ನಾಲ್ಕನೇ ಸಿಬ್ಬಂದಿಯ ಪತ್ತೆಗಾಗಿ ಅಮೆರಿಕ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ಸಮುದ್ರದಾದ್ಯಂತ ತೀವ್ರ ಹುಡುಕಾಟ ನಡೆಸುತ್ತಿವೆ.
ಪ್ರಸ್ತುತ ಕೊಲ್ಲಿ ವಲಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವುದರಿಂದ, ಈ ಹೆಲಿಕಾಪ್ಟರ್ ಮೇಲೆ ಇರಾನ್ ಅಥವಾ ಅದರ ಬೆಂಬಲಿತ ಪಡೆಗಳು ಕ್ಷಿಪಣಿ ದಾಳಿ ನಡೆಸಿರಬಹುದು ಎಂಬ ಭೀತಿ ಜಾಗತಿಕ ಮಟ್ಟದಲ್ಲಿ ಮೂಡಿತ್ತು. ಆದರೆ ಈ ಅನುಮಾನಗಳನ್ನು ತಳ್ಳಿಹಾಕಿರುವ ಯುಎಸ್ ನೌಕಾಪಡೆಯ ಕಮಾಂಡರ್ಸ್, ಇದು ಶತ್ರು ಪಡೆಗಳ ಯಾವುದೇ ದಾಳಿಯಿಂದ ಸಂಭವಿಸಿದ್ದಲ್ಲ, ಕೇವಲ ಆಕಸ್ಮಿಕ ತಾಂತ್ರಿಕ ವೈಫಲ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಘಟನೆಯ ಇಂಚಿಂಚು ವಿವರ ಪಡೆಯಲು ಉನ್ನತ ಮಟ್ಟದ ಮಿಲಿಟರಿ ತನಿಖೆಗೆ ಆದೇಶಿಸಲಾಗಿದೆ.
ಮಾರ್ಚ್ ತಿಂಗಳ ಕೊನೆಯಲ್ಲಿ ಅಮೆರಿಕದ ಕರಾವಳಿಯಿಂದ ಹೊರಟಿದ್ದ ಈ ದೈತ್ಯ ಹೆಲಿಕಾಪ್ಟರ್ ಪಡೆಗಳು, ಆಫ್ರಿಕಾ ಖಂಡದ ಮೂಲಕ ಸಾಗಿ ಏಪ್ರಿಲ್ ತಿಂಗಳಿನಲ್ಲಿ ಅರಬ್ಬಿ ಸಮುದ್ರವನ್ನು ಪ್ರವೇಶಿಸಿದ್ದವು. ಈ ವಲಯದಲ್ಲಿ ಚಲಿಸುವ ಅಮೆರಿಕದ ತೈಲ ಹಾಗೂ ಸರಕು ಸಾಗಣೆ ಹಡಗುಗಳಿಗೆ ಇರಾನ್ನಿಂದ ರಕ್ಷಣೆ ನೀಡುವುದು ಈ ಪಡೆಯ ಮುಖ್ಯ ಜವಾಬ್ದಾರಿಯಾಗಿದೆ.
ಯುದ್ಧಕಾಲದಲ್ಲಿ ಶತ್ರುಗಳ ಮೇಲೆ ನಿಗಾ ಇಡಲು ಮತ್ತು ಸೈನಿಕರ ತುರ್ತು ರಕ್ಷಣೆಗೆ ಬಳಸಲಾಗುವ ಈ ‘ಸೀ ಹಾಕ್’ ಹೆಲಿಕಾಪ್ಟರ್ನ ಮತ್ತೊಬ್ಬ ಯೋಧನನ್ನು ಪತ್ತೆಹಚ್ಚಲು ಅಮೆರಿಕನ್ ಕಮಾಂಡೋಗಳು ಈಗ ಸಮಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.