newsics.com| ನ್ಯೂಸಿಕ್ಸ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಪೋಷಕರಿಗೆ ಮತ್ತು ಶಿಕ್ಷಕರಿಗೆ ಅತ್ಯಂತ ಕಠಿಣ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಹಾಗೂ ಮಕ್ಕಳನ್ನು ಮತ್ತೆ ಪುಸ್ತಕಗಳ ಪ್ರಪಂಚಕ್ಕೆ ಕರೆತರಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು, ಮಕ್ಕಳನ್ನು ಸ್ಕ್ರೀನ್ ಟೈಮ್‌ನಿಂದ ದೂರವಿಡಲು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂಬ ವಿಶೇಷ ಜಾಗೃತಿ ಅಭಿಯಾನವನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವಂತೆ ಅಧಿಕೃತ ಸುತ್ತೋಲೆ ಹೊರಡಿಸಿದೆ.
ಅತಿಯಾದ ಮೊಬೈಲ್ ಬಳಕೆಯಿಂದಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಣ್ಮರೆಯಾಗುತ್ತಿದೆ. ಜೊತೆಗೆ ಆಟದ ಮೈದಾನದಿಂದಲೂ ಮಕ್ಕಳು ದೂರ ಉಳಿಯುತ್ತಿದ್ದು, ಅವರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೇಲಿನ ಗಮನ ಸಂಪೂರ್ಣವಾಗಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಲು ಶಾಲಾ ಶಿಕ್ಷಕರು, ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (SDMC) ಇಲಾಖೆಯು ಪೂರ್ಣ ಜವಾಬ್ದಾರಿ ವಹಿಸಿದೆ. ಮಕ್ಕಳ ಮಾನಸಿಕ ಸ್ಥಿತಿಯನ್ನು ಬದಲಾಯಿಸಲು ಅಗತ್ಯ ಬಿದ್ದರೆ ಖ್ಯಾತ ಮನೋವೈದ್ಯರು ಹಾಗೂ ಮಕ್ಕಳ ತಜ್ಞರ ನೆರವು ಪಡೆದುಕೊಳ್ಳಲು ಸೂಚಿಸಲಾಗಿದೆ.
ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆಗಳ ಬಗ್ಗೆ ಪಾಠ!
ಇತ್ತೀಚಿನ ದಿನಗಳಲ್ಲಿ ಮಕ್ಕಳು ತಾವೇ ತಿಳಿಯದೇ ಆನ್‌ಲೈನ್ ಜಾಲಕ್ಕೆ ಸಿಲುಕುತ್ತಿದ್ದಾರೆ. ಇದನ್ನು ತಡೆಯಲು ಈ ಅಭಿಯಾನದಲ್ಲಿ ಹೊಸ ತಂತ್ರ ಬಳಸಲಾಗುತ್ತಿದ್ದು, ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ (Social Media) ಅಡ್ಡಪರಿಣಾಮಗಳು, ಇಂಟರ್ನೆಟ್ ವಂಚನೆಗಳು ಮತ್ತು ಇತ್ತೀಚಿನ ‘ಡಿಜಿಟಲ್ ಅರೆಸ್ಟ್’ ನಂತಹ ನೈಜ ಘಟನೆಗಳ ಉದಾಹರಣೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಗುವುದು. ಇದರಿಂದ ಮಕ್ಕಳು ಆನ್‌ಲೈನ್ ಪ್ರಪಂಚದ ಕರಾಳ ಮುಖ ಮತ್ತು ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮುಂಬರುವ ಯುವ ಪೀಳಿಗೆ ಯಾವುದೇ ಆನ್‌ಲೈನ್ ಟ್ರ್ಯಾಪ್‌ಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಈ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನವು ದಾರಿದೀಪವಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
Traffic Fine ಟ್ರಾಫಿಕ್ ಫೈನ್ ಅರ್ಧಕ್ಕರ್ಧ ಕಟ್: ಸವಾರರೇ ಜುಲೈ 10ರ ಒಳಗಡೆ ಈ ಬಂಪರ್ ಆಫರ್ ಮಿಸ್ ಮಾಡ್ಕೋಬೇಡಿ!