ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲೊಂದು ಕಪ್ ಬಿಸಿ ಚಹಾ ಮತ್ತು ಮತ್ತೊಂದು ಕೈಯಲ್ಲಿ ಹೊಗೆಯಾಡುವ ಸಿಗರೇಟ್ ಹಿಡಿಯುವುದು ಇಂದಿನ ಯುವ ಪೀಳಿಗೆ ಹಾಗೂ ಅನೇಕರ ದೈನಂದಿನ ಫ್ಯಾಷನ್ ಮತ್ತು ಹವ್ಯಾಸವಾಗಿಬಿಟ್ಟಿದೆ. ‘ಟೀ ಜೊತೆ ಸಿಗರೇಟ್ ಇಲ್ಲದಿದ್ದರೆ ಕಿಕ್ ಸಿಗಲ್ಲ’ ಎಂದು ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಕ್ಷಣಿಕಕ್ಕೆ ಮಾತ್ರ ಆನಂದ ನೀಡುವ ಈ ವಿಷಕಾರಿ ಕಾಂಬಿನೇಷನ್ ನಿಮ್ಮ ದೇಹದ ಅಂಗಾಂಗಗಳನ್ನು ಹೇಗೆ ಹಾಳುಮಾಡುತ್ತದೆ ಎಂಬ ಶಾಕಿಂಗ್ ಮಾಹಿತಿ ಸಂಶೋಧನೆಗಳಿಂದ ಬಹಿರಂಗವಾಗಿದೆ.
ಈ ಮಾರಕ ವ್ಯಸನದಿಂದ ಉಂಟಾಗುವ ಪ್ರಮುಖ 6 ಅಡ್ಡಪರಿಣಾಮಗಳ ವಿವರ ಇಲ್ಲಿದೆ
1. ಅನ್ನನಾಳ ಹಾಗೂ ಬಾಯಿ ಕ್ಯಾನ್ಸರ್ಗೆ ನೇರ ದಾರಿ
ಕುದಿಯುವ ಬಿಸಿ ಚಹಾವನ್ನು ಕುಡಿದಾಗ ಅದು ಬಾಯಿ, ಗಂಟಲು ಮತ್ತು ಅನ್ನನಾಳದ ಸೂಕ್ಷ್ಮ ಒಳಪದರವನ್ನು ಸುಡುತ್ತದೆ. ಇತ್ತ ಸಿಗರೇಟ್ನಲ್ಲಿರುವ ನಿಕೋಟಿನ್ ಸೇರಿದಂತೆ ಕರಗದಿರುವ ರಾಸಾಯನಿಕಗಳು ಈಗಾಗಲೇ ಅಲ್ಲಿನ ಕೋಶಗಳನ್ನು ದುರ್ಬಲಗೊಳಿಸಿರುತ್ತವೆ. ಈ ಎರಡೂ ಒಟ್ಟಿಗೆ ಸೇರಿದಾಗ ಜೀವಕೋಶಗಳು ದಕ್ಕೆಗೊಳಗಾಗಿ ಕ್ಯಾನ್ಸರ್ ಗಡ್ಡೆಗಳು ಬೆಳೆಯುವ ಅಪಾಯ ದುಪ್ಪಟ್ಟಾಗುತ್ತದೆ.
2. ಹಾರ್ಟ್ ಅಟ್ಯಾಕ್ ಭೀತಿ: ಹೃದಯದ ಮೇಲೆ ಡಬಲ್ ಪ್ರೆಶರ್
ಚಹಾದಲ್ಲಿರುವ ‘ಕೆಫೀನ್’ ಅಂಶವು ನರಗಳನ್ನು ಉತ್ತೇಜಿಸಿ ರಕ್ತದೊತ್ತಡವನ್ನು ಹೆಚ್ಚಿಸಿದರೆ, ಸಿಗರೇಟ್ನ ‘ನಿಕೋಟಿನ್’ ಹೃದಯದ ಬಡಿತವನ್ನು ಅಸಹಜವಾಗಿ ಏರಿಸುತ್ತದೆ. ಈ ಪ್ರಭಾವದಿಂದ ಹೃದಯವು ಸಾಮಾನ್ಯಕ್ಕಿಂತ ಎರಡು ಪಟ್ಟು ವೇಗವಾಗಿ ರಕ್ತ ಪಂಪ್ ಮಾಡಬೇಕಾಗುತ್ತದೆ. ಇದು ದಿಢೀರ್ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಸಂಭವಿಸಲು ಪ್ರಮುಖ ಕಾರಣವಾಗುತ್ತದೆ.
3. ರಕ್ತನಾಳಗಳ ಸಂಕೋಚನ, ಆಮ್ಲಜನಕದ ಕೊರತೆ
ಸಿಗರೇಟ್ನಿಂದ ಹೊರಬರುವ ವಿಷಕಾರಿ ಹೊಗೆಯು ದೇಹದ ರಕ್ತನಾಳಗಳನ್ನು ಕಿರಿದಾಗುವಂತೆ (ಸಂಕುಚಿತ) ಮಾಡುತ್ತದೆ. ಇದರಿಂದ ಮೆದುಳು, ಕೈ ಮತ್ತು ಕಾಲುಗಳಿಗೆ ರಕ್ತ ಪೂರೈಕೆ ಕುಂಠಿತಗೊಂಡು, ದೇಹದ ಪ್ರತಿಯೊಂದು ಭಾಗಕ್ಕೂ ತಲುಪಬೇಕಾದ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳು ಸಿಗದೆ ಅಂಗಾಂಗಗಳು ನಿಷ್ಕ್ರಿಯಗೊಳ್ಳತೊಡಗುತ್ತವೆ.
4. ಗ್ಯಾಸ್ಟ್ರಿಕ್ ಅಲ್ಸರ್ ಮತ್ತು ಜೀರ್ಣಾಂಗವ್ಯೂಹದ ನಾಶ
ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಸಿಗರೇಟ್ ಒಟ್ಟಿಗೆ ಸೇವಿಸುವುದರಿಂದ ಜಠರದಲ್ಲಿ ಆಮ್ಲದ (Acid) ಉತ್ಪತ್ತಿ ತೀವ್ರಗೊಳ್ಳುತ್ತದೆ. ಪರಿಣಾಮವಾಗಿ ನಿರಂತರ ಎದೆಯುರಿ, ಹುಳಿ ತೇಗು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲಾರಂಭಿಸಿ, ಮುಂದುವರಿದು ಅದು ಹೊಟ್ಟೆಯ ಒಳಗೆ ಗಂಭೀರವಾದ ‘ಗ್ಯಾಸ್ಟ್ರಿಕ್ ಅಲ್ಸರ್’ (ಹುಣ್ಣು) ಸೃಷ್ಟಿ ಮಾಡುತ್ತದೆ.
5. ರಕ್ತಹೀನತೆ ಕೊರತೆ
ಅತಿಯಾಗಿ ಟೀ ಕುಡಿಯುವುದರಿಂದ ದೇಹವು ಆಹಾರದಲ್ಲಿನ ಕಬ್ಬಿಣದ ಅಂಶವನ್ನು (Iron) ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇತ್ತ ಸಿಗರೇಟ್ ಜೀವಸತ್ವಗಳನ್ನು ನಾಶಪಡಿಸುತ್ತದೆ. ಇದು ರಕ್ತಹೀನತೆಗೆ (Anemia) ದಾರಿ ಮಾಡಿಕೊಡುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿ ಸಣ್ಣಪುಟ್ಟ ಸೋಂಕುಗಳಿಗೂ ದೇಹ ಬೇಗನೆ ತುತ್ತಾಗುವಂತೆ ಮಾಡುತ್ತದೆ.
6. ಶ್ವಾಸಕೋಶ ಸಂಪೂರ್ಣ ಬ್ಲಾಕ್
ಧೂಮಪಾನವು ಶ್ವಾಸಕೋಶವನ್ನು ನೇರವಾಗಿ ಹಾನಿಗೊಳಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಚಹಾದ ಬಿಸಿಯೊಂದಿಗೆ ಸಿಗರೇಟ್ ಸೇದಿದಾಗ ಉಸಿರಾಟದ ನಳಿಕೆಗಳು ತೀವ್ರವಾಗಿ ಹಾನಿಗೊಳಗಾಗುತ್ತವೆ. ಇದು ಕ್ರಾನಿಕ್ ಆಬ್ಸ್ಟ್ರಕ್ಟಿಪ್ ಪಲ್ಮನರಿ ಡಿಸೀಸ್ (COPD) ಹಾಗೂ ಉಬ್ಬಸ, ದೀರ್ಘಕಾಲದ ಕೆಮ್ಮಿನಂತಹ ಅಸ್ತಮಾ ತೊಂದರೆಗಳನ್ನು ಉಲ್ಬಣಗೊಳಿಸುತ್ತದೆ.
ನೆನಪಿಡಿ, ಬದುಕು ಅತ್ಯಂತ ಅಮೂಲ್ಯವಾದದ್ದು. ಕೇವಲ ಐದು ನಿಮಿಷಗಳ ಮಜಾವನ್ನು ನೀಡುವ ಈ ಅಪಾಯಕಾರಿ ಹವ್ಯಾಸ ನಿಮ್ಮ ಆಯಸ್ಸನ್ನೇ ಕಡಿಮೆ ಮಾಡಬಹುದು. ಆರೋಗ್ಯಕರ ಜೀವನಕ್ಕಾಗಿ ಇಂದೇ ಈ ಮಾರಕ ಅಭ್ಯಾಸವನ್ನು ಬಿಟ್ಟು ಬಿಡಿ.