newsics.com| ನ್ಯೂಸಿಕ್ಸ್
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರ ಪಾಲಿಗೆ ಸಾವಿನ ಬಸ್ ಆಗಿ ಪರಿಣಮಿಸಿದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ಮಧುವನಹಳ್ಳಿ ಬಳಿ ನಡೆದಿದೆ.
ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಮಧುವನಹಳ್ಳಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ಸೈನ್ ಬೋರ್ಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೈಯರ್ ಬ್ಲಾಸ್ಟ್ ಆಗಿ ಬಸ್ ರಸ್ತೆಯ ಬದಿಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್ ಅಲ್ಲಿದ್ದ ಬೇವಿನ ಮರಕ್ಕೆ ತಗುಲಿ ನಿಂತಿದೆ, ಇಲ್ಲದಿದ್ದರೆ ಸಾವು-ನೋವಿನ ಪ್ರಮಾಣ ಇನ್ನು ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರು ಮತ್ತು ಗಾಯಾಳುಗಳು:
ಈ ಅಪಘಾತದಲ್ಲಿ ಕೊಳ್ಳೇಗಾಲ ಪಟ್ಟಣದ ಪುಟ್ಟನಂಜಮ್ಮ ಹಾಗೂ ಕುದೇರು ಗ್ರಾಮದ ಮಹೇಶ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ 42 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಪೈಕಿ 21 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 21 ಜನರಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಬ್ಯುಲೆನ್ಸ್ ಕೊರತೆ ಎದುರಾದಾಗ ಸ್ಥಳೀಯ ವಾಹನ ಚಾಲಕರು ಖಾಸಗಿ ಕಾರುಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಎಸ್ಪಿ ಮುತ್ತುರಾಜ್ ಹೇಳಿಕೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಎಸ್‌ಪಿ ಮುತ್ತುರಾಜ್ ಅವರು ಮಾಹಿತಿ ನೀಡಿ, ‘ಮೇಲ್ನೋಟಕ್ಕೆ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸೈನ್ ಬೋರ್ಡ್‌ಗೆ ಡಿಕ್ಕಿ ಹೊಡೆದ ನಂತರ ಟೈಯರ್ ಸ್ಫೋಟಗೊಂಡಿದೆ. ಜಿಲ್ಲೆಯ ‘ಬ್ಲಾಕ್ ಸ್ಪಾಟ್’ (ಅಪಘಾತ ವಲಯ) ಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ರಿವ್ಯೂ ಮಾಡಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.
ಪ್ರಯಾಣಿಕರೊಬ್ಬರು ಮಾತನಾಡಿ, ‘ಬೆಟ್ಟದಿಂದ ಕೆಳಗೆ ಬರುವಾಗಲೇ ಚಾಲಕ ಬಸ್ಸನ್ನು ಅತ್ಯಂತ ವೇಗವಾಗಿ ಚಲಾಯಿಸುತ್ತಿದ್ದ, ಆಗಲೇ ಒಂದು ಬಾರಿ ಅಪಘಾತದಿಂದ ಬಚಾವ್ ಆಗಿದ್ದೆವು. ಆದರೆ ಚಾಲಕನ ಅಜಾಗರೂಕತೆ ಈಗ ಇಬ್ಬರ ಪ್ರಾಣ ಬಲಿಪಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Gruhajyoti scheme ಗೃಹಜ್ಯೋತಿ ದುರ್ಬಳಕೆಗೆ ಬ್ರೇಕ್: ಮನೆ ಮನೆಗೂ ಬರಲಿದೆ ಹೊಸ ಅರ್ಜಿ!
Mysterious disease ನಿಗೂಢ ಕಾಯಿಲೆಗೆ ಹತ್ತೇ ದಿನದಲ್ಲಿ ಒಂದೇ ಕುಟುಂಬದ ಐವರ ಬಲಿ! ಎಲ್ಲೆಲ್ಲೂ ಆತಂಕ
Sucide case ಪತ್ನಿಯ ಕಿರುಕುಳ, ದೌರ್ಜನ್ಯಕ್ಕೆ ಬೇಸತ್ತು ನೇಣಿಗೆ ಶರಣಾದ ಪತಿ