newsics.com | ನ್ಯೂಸಿಕ್ಸ್
ಮಾಲಾಡ್ (ಮುಂಬೈ): ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಹಾಗೂ ಕೇವಲ 1 ರೂಪಾಯಿಗೆ ಬಟ್ಟೆ ನೀಡುವ ಆಫರ್‌ನಿಂದಾಗಿ ಮುಂಬೈನ ಮಾಲಾಡ್ ವೆಸ್ಟ್‌ನಲ್ಲಿರುವ ಇನ್ಫಿನಿಟಿ ಮಾಲ್‌ನಲ್ಲಿ ಶನಿವಾರ ಭಾರೀ ಜನಜಂಗುಳಿ ನಿರ್ಮಾಣವಾಗಿದ್ದು, ಕಾಲ್ತುಳಿತದಂತಹ ಪರಿಸ್ಥಿತಿ ಎದುರಾಗಿದೆ.
ಯುವ ಪೀಳಿಗೆ ಹಾಗೂ ಪ್ರಮುಖವಾಗಿ ‘ಜೆನ್-ಝಿ’ (Gen Z) ಗ್ರಾಹಕರನ್ನು ಸೆಳೆಯುವ ‘ನ್ಯೂಮಿ’ (NEWME) ಎಂಬ ಫ್ಯಾಶನ್ ಬ್ರ್ಯಾಂಡ್ ಹಮ್ಮಿಕೊಂಡಿದ್ದ ‘₹1 ಸೇಲ್’ ಪ್ರಚಾರವೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ವೈರಲ್ ರೀಲ್ ತಂದ ಆಪತ್ತು: ಮಳಿಗೆ ಬಂದ್ ಮಾಡಿದ ಪೊಲೀಸರು
ಮುಂಬೈನ ಇನ್ಫಿನಿಟಿ ಮಾಲ್‌ನ ನ್ಯೂಮಿ ಔಟ್‌ಲೆಟ್‌ನಲ್ಲಿ ಶನಿವಾರ ₹1 ಆಫರ್ ಇರಲಿದೆ ಎಂದು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವೈರಲ್ ಆಗಿತ್ತು. ಇದನ್ನು ನಂಬಿ ನಿನ್ನೆ ಮುಂಜಾನೆಯಿಂದಲೇ ಸಾವಿರಾರು ಗ್ರಾಹಕರು, ಮುಖ್ಯವಾಗಿ ಯುವಕ-ಯುವತಿಯರು ಮಾಲ್‌ನತ್ತ ಧಾವಿಸಿದ್ದಾರೆ. ನೋಡನೋಡುತ್ತಿದ್ದಂತೆ ಮಾಲ್‌ನ ಕಿರಿದಾದ ಪ್ರವೇಶ ದ್ವಾರ ಮತ್ತು ಕಾರಿಡಾರ್‌ಗಳಲ್ಲಿ ಜನಸ್ತೋಮ ಜಮಾಯಿಸಿದೆ.
ಸ್ಥಳೀಯರ ಆತಂಕ:
ಮುಗಿಬಿದ್ದ ಜನರನ್ನು ನಿಯಂತ್ರಿಸಲು ಮಾಲ್‌ನ ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರೂ ಪರಿಸ್ಥಿತಿ ಕೈಮೀರಿತು. ಒಬ್ಬರ ಮೇಲೊಬ್ಬರು ನೂಕಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿತ್ತು.
ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಮಾಲ್‌ಗೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, ಅಂದು ಇಡೀ ದಿನ ನ್ಯೂಮಿ ಮಳಿಗೆಯನ್ನು ಮುಚ್ಚಿಸಲಾಯಿತು ಹಾಗೂ ಆಫರ್ ಅನ್ನು ರದ್ದುಗೊಳಿಸಲಾಗಿದೆ ಎಂದು ಅನೌನ್ಸ್ ಮಾಡಲಾಯಿತು. ಪೊಲೀಸರ ಸಮಯೋಚಿತ ಕ್ರಮಗಳಿಂದಾಗಿ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಲಿಲ್ಲ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Divorce on reality show ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಘೋಷಿಸಿದ ನಟಿ! ಆಕಾಂಕ್ಷಾ ಹೇಳಿದ್ದೇನು? ವಿಡಿಯೋ ನೋಡಿ