newsics.com|ನ್ಯೂಸಿಕ್ಸ್
ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ಪ್ರಸಿದ್ಧ ತೈಲ ದೈತ್ಯ ಸಂಸ್ಥೆ ಸೌದಿ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ಇಂದು ಮುಂಜಾನೆ ಸುಮಾರು 6 ಗಂಟೆಗೆ ಪತನಗೊಂಡಿದೆ. ಅದರಲ್ಲಿದ್ದ ಎಲ್ಲಾ 14 ಜನರು ಸಾವನ್ನಪ್ಪಿದ್ದು, ಸೌದಿ ಅರೇಬಿಯಾದ ರಾಸ್ ತನೂರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ರಾಸ್ ತನೂರಾ ಪಶ್ಚಿಮ ಏಷ್ಯಾ ವಲಯದಲ್ಲೇ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕವನ್ನು ಹೊಂದಿರುವ ಪ್ರಮುಖ ಕೇಂದ್ರವಾಗಿದೆ.
ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ 14 ಜನರೂ ಸೌದಿ ಅರೇಬಿಯಾದ ನಾಗರಿಕರಾಗಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ ಧೃಡಪಡಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸೌದಿ ಇಂಧನ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದು, ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.