newsics.com
ಬೆಂಗಳೂರು: ಪಾಕಿಸ್ತಾನ್ ಸೇರಿ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಏರ್ಪೋರ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದೆ. ಜೊತೆಗೆ ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆಂದು ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಮಂಕಿಪಾಕ್ಸ್ ಕಂಡು ಬಂದ್ರೆ 21 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆ ನಿನ್ನೆ ಹೊರಡಿಸಿದ ಸುತ್ತೋಲೆಯಲ್ಲಿ, ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಅವರು ಮಂಗನ ಕಾಯಿಲೆಯ ಶಂಕಿತ ಪ್ರಕರಣಗಳ ಬಗ್ಗೆ ನಿಗಾ ಇಡಲು ಸೂಚಿಸಿದ್ದಾರೆ. ವಿಮಾನ ನಿಲ್ದಾಣಗಳು, ಬಂದರು ಮತ್ತು ರಾಜ್ಯದ ಎಲ್ಲಾ ಕಡೆಗಳ ಪ್ರವೇಶ ಕೇಂದ್ರಗಳ ವ್ಯವಸ್ಥಾಪಕ ಅಧಿಕಾರಿಗಳಿಗೆ ಎಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಶಂಕಿತರನ್ನ ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.
ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ಎಚ್ಚರವಹಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಂದರೆ ಅವರನ್ನು ಐಸೋಲೇಟ್ ಮಾಡುವುದು, ಚಿಕಿತ್ಸೆ ನೀಡುವುದರ ಬಗ್ಗೆ ರಾಜ್ಯದ ಆರೋಗ್ಯ ಸಿಬ್ಬಂದಿ ಗಮನಹರಿಸುವಂತೆ ಸೂಚಿಸಿದ್ದಾರೆ.