newsics.com/ನ್ಯೂಸಿಕ್ಸ್
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಮಾಜಿ ಹೋರಾಟಗಾರ್ತಿ ಆಶ್ಲೇ ಸೇಂಟ್ ಕ್ಲೇರ್ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್ ಜತೆಗಿನ ತಮ್ಮ ಸಂಬಂಧ ಮತ್ತು ಮಗುವಿನ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸದೇ ರಹಸ್ಯವಾಗಿ ಇಡಲು ತಮಗೆ ನೀಡಲಾಗಿದ್ದ ಕೋಟ್ಯಂತರ ಡಾಲರ್ ಮೌಲ್ಯದ ಹಣಕಾಸಿನ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.
27 ವರ್ಷದ ಆಶ್ಲೇ ಅವರು ಪತ್ರಕರ್ತ ಡಾನ್ ಲೆಮನ್ ಅವರ ‘ಡಾನ್ ಲೆಮನ್ ಶೋ’ ಪಾಡ್‌ಕಾಸ್ಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಹಣಕ್ಕಿಂತ ಹೆಚ್ಚಾಗಿ ನಾನು ನನ್ನ ನೈತಿಕತೆ ಮತ್ತು ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಸ್ಕ್ ಅವರ ಸಂಪತ್ತು ನಿರ್ವಹಣಾಧಿಕಾರಿ ಜ್ಯಾರೆಡ್ ಬಿರ್ಚಾಲ್ ಅವರು ಕೋಟ್ಯಂತರ ರೂಪಾಯಿಗಳ ಆಫರ್ ಅನ್ನು ಮೊದಲು ನನ್ನ ಮುಂದಿಟ್ಟಿದ್ದರು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಅತ್ಯಂತ ಗೌಪ್ಯವಾಗಿ ಇಡಬೇಕಾದ ಇಂತಹ ಮಹತ್ವದ ಒಪ್ಪಂದದ ಪ್ರಸ್ತಾವನೆಯನ್ನು ಸಿಗ್ನಲ್ ಆಯಪ್‌ನ ‘ಡಿಸಪಿಯರಿಂಗ್ ಮೆಸೇಜಸ್’ (ಸ್ವಯಂಚಾಲಿತವಾಗಿ ಅಳಿಸಿಹೋಗುವ ಸಂದೇಶಗಳು) ಮೂಲಕ ಕಳುಹಿಸಲಾಗಿತ್ತು. ಇದನ್ನು ನೋಡಿ ನನಗೆ ಶಾಕ್ ಆಗಿತ್ತು ಎಂದು ಆಶ್ಲೇ ಹೇಳಿದ್ದಾರೆ.
ಇನ್ನೂ ಆರಂಭದಲ್ಲೇ ಸ್ವತಃ ಮಸ್ಕ್ ಅವರೇ ಒಂದು ದೊಡ್ಡ ಮೊತ್ತವನ್ನು ಮುಂಗಡವಾಗಿ ಪಾವತಿಸಲು ನಿರ್ಧರಿಸಿದ್ದರು ಎಂಬ ವದಂತಿ ಇದ್ದು, ಈ ಕುರಿತು ಮಾತನಾಡಿರುವ ಆಶ್ಲೇ, ಮಸ್ಕ್ ಅವರು ಆರಂಭದಲ್ಲಿ ಜ್ಯಾರೆಡ್ ಮತ್ತು ನನಗೆ ಒಂದು ಸಂದೇಶ ಕಳುಹಿಸಿದ್ದರು. ಅದರಲ್ಲಿ, ಮನೆ ಖರೀದಿ ಮತ್ತು ತುರ್ತು ಬಂಡವಾಳಕ್ಕಾಗಿ ಆಶ್ಲೇ ಅವರಿಗೆ ತಕ್ಷಣವೇ $15 ಮಿಲಿಯನ್ (ಸುಮಾರು 125 ಕೋಟಿ ರೂ.ಗಿಂತ ಹೆಚ್ಚು) ವರ್ಗಾಯಿಸಿ ಎಂದು ತಿಳಿಸಲಾಗಿತ್ತು. ಆದರೆ, ಇದಾದ ಕೆಲವು ದಿನಗಳ ನಂತರ ಜ್ಯಾರೆಡ್ ನನಗೆ ಫೋನ್ ಮಾಡಿ ಸತತ ಎರಡು ಗಂಟೆಗಳ ಕಾಲ ಮಾತನಾಡಿದರು. ಅಲ್ಲದೆ, ಈ ಹಣವನ್ನು ಪಡೆಯಬೇಕಾದರೆ ನಾನು ‘ನಾನ್-ಡಿಸ್ಕ್ಲೋಷರ್ ಅಗ್ರಿಮೆಂಟ್’ (NDA – ವಿಷಯವನ್ನು ರಹಸ್ಯವಾಗಿಡುವ ಒಪ್ಪಂದ) ಒಂದಕ್ಕೆ ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ ಎಂಬ ವಿಷಯವನ್ನು ತಿಳಿಸಿದರು ಎಂದು ಒಪ್ಪಂದದ ಹಿಂದಿನ ಅಸಲಿ ಸಂಗತಿಯನ್ನು ಆಶ್ಲೇ ಬಿಚ್ಚಿಟ್ಟಿದ್ದಾರೆ.
ಮಸ್ಕ್ ಜೊತೆಗಿನ ಸಂಬಂಧದ ಬಗ್ಗೆ ಸಂಪೂರ್ಣವಾಗಿ ಮೌನ ಕಾಯ್ದುಕೊಳ್ಳಲು ಒಪ್ಪಿಕೊಂಡರೆ, ತಮಗೆ $15 ಮಿಲಿಯನ್ (ಸುಮಾರು 125 ಕೋಟಿ ರೂ.) ಮುಂಗಡ ಹಣದ ಜೊತೆಗೆ ಮುಂದಿನ 20 ವರ್ಷಗಳವರೆಗೆ ಪ್ರತಿ ತಿಂಗಳು $100,000 (ಸುಮಾರು 83 ಲಕ್ಷ ರೂ.) ನೀಡುವುದಾಗಿ ಆಫರ್ ಮಾಡಲಾಗಿತ್ತು ಎಂದು ಆಶ್ಲೇ ಆರೋಪಿಸಿದ್ದಾರೆ. ಆದರೆ, ಈ ಒಪ್ಪಂದದ ನಿಯಮಗಳು ಅತ್ಯಂತ ಕಠಿಣವಾಗಿದ್ದವು. ಇದರ ಪ್ರಕಾರ ಆಶ್ಲೇ ಅವರು ಎಲಾನ್ ಮಸ್ಕ್, ಅವರ ಉದ್ಯೋಗಿಗಳು ಅಥವಾ ಅವರ ಕಂಪನಿಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವಂತಿರಲಿಲ್ಲ ಎಂದು ಆಶ್ಲೇ ಹೇಳಿಕೊಂಡಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣಕಾಸಿನ ಆಫರ್ ಇದ್ದರೂ ಸಹ, ಆಶ್ಲೇ ಅದಕ್ಕೆ ಮಣಿಯದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಉಳಿದರು. ತಾವು ಈ ಒಪ್ಪಂದಕ್ಕೆ ಸಹಿ ಮಾಡಲು ಸಾಧ್ಯವಿಲ್ಲ ಎಂದು ಜ್ಯಾರೆಡ್‌ಗೆ ಸ್ಪಷ್ಟವಾಗಿ ತಿಳಿಸಿದರು. ಈ ಒಪ್ಪಂದ ನನ್ನ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಲ್ಲ. ನಾನು ನೈತಿಕತೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿರುವ ಆಶ್ಲೇ, ಇಂತಹ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿ ಕೋಟ್ಯಂತರ ರೂಪಾಯಿ ಪಡೆಯುವುದಕ್ಕಿಂತ, ನನ್ನ ಇಬ್ಬರು ಮಕ್ಕಳೊಂದಿಗೆ ಒಂದು ಸಣ್ಣ ಸ್ಟುಡಿಯೋ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವುದೇ ಮೇಲು ಎಂದು ಅವರಿಗೆ ತಿಳಿಸಿದ್ದಾಗಿ ಹೇಳಿದ್ದಾಗಿ ಆಶ್ಲೇ ತಿಳಿಸಿದ್ದಾರೆ.
ಈ ಹಿಂದಿನ ಸಂಬಂಧದಿಂದ ಹುಟ್ಟಿದ ಹಿರಿಯ ಮಗು ಸೇರಿದಂತೆ ಇಬ್ಬರು ಮಕ್ಕಳ ತಾಯಿಯಾಗಿರುವ ಆಶ್ಲೇ, ತಮ್ಮ ಕುಟುಂಬದ ಹಿತದೃಷ್ಟಿಯಿಂದ ಯಾವುದು ಸರಿಯೋ ಅದನ್ನೇ ಮಾಡಿರುವುದಾಗಿ ಹೇಳಿದ್ದಾರೆ. ಆಶ್ಲೇ ಅವರು ಮೊದಲ ಬಾರಿಗೆ 2025ರ ಫೆಬ್ರವರಿಯಲ್ಲಿ ತಮ್ಮ ಐದು ತಿಂಗಳ ಮಗ ‘ರೋಮುಲಸ್’ಗೆ ಎಲಾನ್ ಮಸ್ಕ್ ಅವರೇ ತಂದೆ ಎಂಬುದನ್ನು ಬಹಿರಂಗವಾಗಿ ಘೋಷಿಸಿದ್ದರು. ತಾವು ಗರ್ಭಿಣಿಯಾದಾಗಿನಿಂದ ಮಸ್ಕ್ ಅವರ ನಡವಳಿಕೆ ಬದಲಾಗಿತ್ತು ಮತ್ತು ಅವರು ಮೊದಲು ಹೇಳಿದ್ದಕ್ಕಿಂತ ಭಿನ್ನವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆಶ್ಲೇ ಈ ಹಿಂದೆ ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದರು. ಆಶ್ಲೇ ಈ ವಿಷಯ ಪ್ರಕಟಿಸಿದ ಕೆಲವೇ ವಾರಗಳಲ್ಲಿ, ನ್ಯೂರಾಲಿಂಕ್ ಕಾರ್ಯನಿರ್ವಾಹಕಿ ಶಿವೋನ್ ಜಿಲಿಸ್ ಅವರೊಂದಿಗೂ ತಮಗೆ ಮತ್ತೊಬ್ಬ ಮಗನಿದ್ದಾನೆ ಎಂಬುದನ್ನು ಮಸ್ಕ್ ಖಚಿತಪಡಿಸಿದ್ದರು. ಇದರೊಂದಿಗೆ ನಾಲ್ಕು ಬೇರೆ ಬೇರೆ ಮಹಿಳೆಯರ ಮೂಲಕ ಎಲಾನ್ ಮಸ್ಕ್ ಒಟ್ಟು 14 ಮಕ್ಕಳ ತಂದೆಯಾಗಿದ್ದಾರೆ.
ಮತ್ತೊಂದೆಡೆ, ಮಸ್ಕ್ ಅವರು ತಮ್ಮ ಮೇಲೆ ಆಶ್ಲೇ ಮಾಡಿರುವ ಆರೋಪಗಳನ್ನು ಈ ಹಿಂದೆಯೇ ನಿರಾಕರಿಸಿದ್ದಾರೆ. ಆ ಮಗು ತಮ್ಮದೇ ಎಂಬುದು ಖಚಿತವಾಗದಿದ್ದರೂ ಸಹ, ಮಸ್ಕ್ ಈಗಾಗಲೇ ಆಶ್ಲೇ ಅವರಿಗೆ $2.5 ಮಿಲಿಯನ್ (ಸುಮಾರು 20 ಕೋಟಿ ರೂ.) ಪಾವತಿಸಿದ್ದಾರೆ. ಇದರ ಜೊತೆಗೆ, ತಾವು ವರ್ಷಕ್ಕೆ $500,000 (ಸುಮಾರು 4 ಕೋಟಿ ರೂ.) ಪಾವತಿಸುತ್ತಿರುವುದಾಗಿ 2025ರ ಮಾರ್ಚ್‌ನಲ್ಲಿ ಮಸ್ಕ್ ಹೇಳಿದ್ದರು. ಪ್ರಸ್ತುತ ಇಬ್ಬರೂ ಈ ವಿಷಯವಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ರಹಸ್ಯ ಒಪ್ಪಂದವನ್ನು ತಿರಸ್ಕರಿಸಿದ ನಂತರ ತಾವು ಮಸ್ಕ್ ಜೊತೆ ನೇರವಾಗಿ ಮಾತನಾಡಿಲ್ಲ ಎಂಬುದನ್ನು ಆಶ್ಲೇ ಅವರು ಡಾನ್ ಲೆಮನ್ ಎದುರು ಖಚಿತಪಡಿಸಿದ್ದಾರೆ. ವಿಶೇಷವೆಂದರೆ, ಎಲಾನ್ ಮಸ್ಕ್ ವಿಶ್ವದ ಮೊದಲ ‘ಟ್ರಿಲಿಯನೇರ್’ (ಲಕ್ಷ ಕೋಟಿ ಒಡೆಯ) ಎಂದು ಹೊರಹೊಮ್ಮಿರುವ ಬೆನ್ನಲ್ಲೇ ಈ ಹೊಸ ವಿವಾದಗಳು ಮುಂಚೂಣಿಗೆ ಬಂದಿವೆ,
ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹಲ್ಲೆ ಮಾಡಿದ ಹೋಟೆಲ್ ಮಾಲೀಕ