ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರೈನಲ್ಲಿ ವರದಕ್ಷಿಣೆ ಬೇಡಿಕೆ ವಿವಾದದ ಹಿನ್ನೆಲೆ ಮದುವೆಯೇ ರದ್ದಾದ ಆಘಾತಕಾರಿ ಘಟನೆ ನಡೆದಿದೆ. ವರಮಾಲೆ ಕಾರ್ಯಕ್ರಮ ಮುಗಿದ ಬಳಿಕ ವರಪಕ್ಷ ಹೆಚ್ಚುವರಿ ಹಣ ಮತ್ತು ಬೈಕ್ಗಾಗಿ ಒತ್ತಡ ಹೇರಿದ ಆರೋಪ ಕೇಳಿಬಂದಿದ್ದು, ಬೇಡಿಕೆ ಈಡೇರದ ಕಾರಣ ಮದುವೆ ಪೂರ್ಣಗೊಳಿಸದೆ ವಾಪಸ್ ತೆರಳಿದೆ.
ತಂದೆ-ತಾಯಿ ಇಲ್ಲದ ನಿಶಾ ಬನ್ಸಲ್ ಎಂಬ ಯುವತಿಯನ್ನು ಅಜ್ಜಿ ಮತ್ತು ಚಿಕ್ಕಪ್ಪ ಸಾಕಿ ಬೆಳೆಸಿದ್ದರು. ಮದುವೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ವರಪಕ್ಷವು ₹2 ಲಕ್ಷ ನಗದು ಮತ್ತು ಬೈಕ್ ಬೇಡಿಕೆ ಇಟ್ಟಿದೆ ಎಂದು ವಧು ಕುಟುಂಬ ಆರೋಪಿಸಿದೆ.
ವರಮಾಲೆ ಬಳಿಕ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಗಲಾಟೆಗೆ ತಿರುಗಿದೆ. ನಂತರ ವರ ಹಾಗೂ ಆತನ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮ ಅರ್ಧದಲ್ಲೇ ಬಿಟ್ಟು ಮೆರವಣಿಗೆಯೊಂದಿಗೆ ಹಿಂತಿರುಗಿದ್ದಾರೆ.
ಮೆಹೆಂದಿ ಹಾಕಿಕೊಂಡ ಕೈಗಳೊಂದಿಗೆ ಇಡೀ ರಾತ್ರಿ ಮದುವೆ ನೆರವೇರುತ್ತದೆ ಎಂದು ಕಾದಿದ್ದ ನಿಶಾಗೆ ನಿರಾಸೆಯಾಗಿದೆ. “ದುರಾಸೆಯ ವ್ಯಕ್ತಿಯನ್ನು ನಾನು ಮದುವೆಯಾಗುವುದಿಲ್ಲ. ನನಗೆ ನ್ಯಾಯ ಬೇಕು” ಎಂದು ಆಕೆ ಹೇಳಿದ್ದಾಳೆ.
ಘಟನೆ ಕುರಿತು ಖುರೈ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವರ, ಆತನ ತಂದೆ ಮತ್ತು ಸಹೋದರ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.