ಉತ್ತರಾಖಂಡದ ಚಂಪಾವತ್ ಜಿಲ್ಲೆಯ ವಿಶೇಷ ಕಾರ್ಯಾಚರಣೆ ದಳ (SOG)ದ ಪೊಲೀಸ್ ಅಧಿಕಾರಿ ಗಿರೀಶ್ ಭಟ್ (38) ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬನ್ಬಾಸಾ ನಿವಾಸಿಯಾಗಿದ್ದ ಗಿರೀಶ್ ಭಟ್ ಸ್ಥಳೀಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ. ತಕ್ಷಣ ಅಲ್ಲಿದ್ದವರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಪರೀಕ್ಷಿಸಿದ ಬಳಿಕ ಮೃತರೆಂದು ಘೋಷಿಸಿದ್ದಾರೆ.
ಮರಣದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಹಾಗೂ ವೈದ್ಯಕೀಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಗಿರೀಶ್ ಭಟ್ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದು, ಅವರ ಅಕಾಲಿಕ ನಿಧನ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಸ್ಥಳೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಚಂಪಾವತ್ ಎಸ್‌ಒಜಿ ಘಟಕದ ಅತ್ಯಂತ ಸಮರ್ಪಿತ ಮತ್ತು ಕಾರ್ಯಕ್ಷಮ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಭಟ್, ಹಲವು ಪ್ರಮುಖ ಪೊಲೀಸ್ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ಸೇವೆ ಗಮನಾರ್ಹವಾಗಿತ್ತು ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.
ಬನ್ಬಾಸಾದ ಶಾರದಾ ಘಾಟ್‌ನಲ್ಲಿ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.
ಇತ್ತೀಚೆಗೆ ಕರ್ನಾಟಕದ ದಾವಣಗೆರೆಯಲ್ಲೂ ರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ ಸುಶೀಲ್ ಕುಮಾರ್ ವರ್ಕೌಟ್ ಬಳಿಕ ಕುಸಿದು ಮೃತಪಟ್ಟ ಘಟನೆ ನಡೆದಿತ್ತು. ಈ ಎರಡು ಘಟನೆಗಳು ತೀವ್ರ ವ್ಯಾಯಾಮದ ವೇಳೆ ಸಂಭವಿಸುವ ಹಠಾತ್ ಆರೋಗ್ಯ ಸಮಸ್ಯೆಗಳ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿವೆ.