newsics.com/ನ್ಯೂಸಿಕ್ಸ್
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನೂತನ ಸಂಪುಟ ಅಸ್ತಿತ್ವಕ್ಕೆ ಬಂದು ವಾರ ಕಳೆದರೂ ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರ ಅಸಮಾಧಾನ ತಣಿದಿಲ್ಲ. ಕೃಷ್ಣ ಬೈರೇಗೌಡ ದೆಹಲಿಗೆ ಹಾರಿದ್ದರೆ, ಮತ್ತೊಂದೆಡೆ ಸಚಿವ ಕೆ.ಎಚ್.ಮುನಿಯಪ್ಪ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ಸಿಟ್ಟಾಗಿ ಮಧ್ಯದಲ್ಲೇ ಎದ್ದು ಹೋಗಿದ್ದರು. ಬರೀ ಸಭೆಯಿಂದ ಬಾಯ್ಕಾಟ್ ಮಾಡದೇ, ರಾಜೀನಾಮೆ ಪತ್ರವನ್ನೂ ಕಳುಹಿಸಿ ಬಿಟ್ಟರು. ಇದಾದ ನಂತರ, ಕೆಎಚ್ ಮುನಿಯಪ್ಪನವರ ಸರದಿ. ಮೊನ್ನೆ ರಾಹುಲ್ ಗಾಂಧಿ ಬಂದಾಗ, ಆಯ್ತು ಎಂದು ಹೇಳಿದವರು, ಈಗ ಆ ಖಾತೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಹಿರಿಯ ಸಚಿವರುಗಳ ಈ ನಿಲುವು, ಕಾಂಗ್ರೆಸ್ ಪಾರ್ಟಿಗೆ ದೊಡ್ಡ ಸಮಸ್ಯೆಯಾಗಿ ಕೂತಿದೆ.
3-4 ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಭೇಟಿ ಬಳಿಕ ತಮಗೆ ಹಂಚಿಕೆಯಾದ ಖಾತೆ ಬಗ್ಗೆ ತೃಪ್ತಿ ಇದೆ. ಐ ಆಯಮ್ ಹ್ಯಾಪಿ ಅಂತ ಮುನಿಯಪ್ಪ ಹೇಳಿದ್ದರು. ಈಗ ಮತ್ತೆ ಖಾತೆ ಬದಲಾವಣೆ ಇಂಗಿತ ವ್ಯಕ್ತಪಡಿಸಿದ್ದಾರೆ. ಡಾ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಕೃಷ್ಣ ಬೈರೇಗೌಡ ‘ಕಂದಾಯ’ದಲ್ಲೇ ಮುಂದುವರಿಯುವ ಇಚ್ಛೆ ಇದೆ. ಹಾಗೊಂದು ವೇಳೆ ಬೆಂಗಳೂರು ಅಭಿವೃದ್ಧಿ ನೀಡುವುದಾದರೆ, ಸಮಗ್ರ ಬೆಂಗಳೂರು ಹಂಚಿಕೆ ಮಾಡಲಿ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ 2ನೇ ಹಂತದ ಸಂಪುಟ ವಿಸ್ತರಣೆ ವೇಳೆ ಖಾತೆ ಬದಲಾವಣೆಗಳಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ತಲೆಕೆಡಿಸಿಕೊಳ್ಳಲು ಪುರಸೊತ್ತು ಇಲ್ಲ:
ಬಿಡಿಎ, ಬಿಎಂಆರ್‌ಡಿಎ ಇಲ್ಲದಿದ್ದರೆ, ಬೆಂಗಳೂರು ಅಭಿವೃದ್ಧಿ ಖಾತೆ ಅಪೂರ್ಣ ಆಗುತ್ತದೆ ಎನ್ನುವುದು ನಿಜ. ಇನ್ನು ಮುನಿಸಿಕೊಳ್ಳುವವರು ಯಾರೂ ಇಲ್ಲ. ಡಿಸೆಂಬರ್ ಕಳೆಯುತ್ತಿದ್ದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಾಸಕರು ಮಗ್ನರಾಗುತ್ತಾರೆ. ಸಂಪುಟದ ಬಗ್ಗೆ ತಲೆಕೆಡಿಸಿಕೊಳ್ಳಲು ಪುರಸೊತ್ತು ಇರುವುದೂ ಇಲ್ಲ. ನಾನು ಸಚಿವ ಸ್ಥಾನದ ರೇಸ್‌ನಲ್ಲಿ ಇಲ್ಲ. ಸಚಿವ ಸ್ಥಾನ ಕೇಳಿಲ್ಲ. ಪರಿಶಿಷ್ಟ ಜಾತಿಗೆ ಒಂದು ಡಿಸಿಎಂ ಕೊಟ್ಟಿದ್ದಾರೆ. ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೂ ಒಂದೊಂದು ಡಿಸಿಎಂ ಹುದ್ದೆ ಕೊಡಬೇಕು. -ಕೆ.ಎನ್.ರಾಜಣ್ಣ, ಮಾಜಿ ಸಚಿವ
ದೆಹಲಿಯಲ್ಲಿ ಸಚಿವರು ಮತ್ತು ಸಚಿವ ಆಕಾಂಕ್ಷಿಗಳ ಮತ್ತೊಂದು ಸುತ್ತಿನ ಲಾಬಿ ಶುರುವಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಬುಧವಾರ ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಲಿರುವುದರಿಂದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.