newsics.com/ನ್ಯೂಸಿಕ್ಸ್
ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ, ಉದೇವಾರ, ಹುಲ್ಲೇಮಕ್ಕಿ, ಕಡೆಗರ್ಜೆ, ಗುಡ್‌ಪೇಟೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಐದಾರು ತಿಂಗಳಿಂದ ಕಾಣೆಯಾಗಿದ್ದ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾಗಿದ್ದು, ರೈತರು ಹಾಗೂ ಕೂಲಿಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.
ಹಿಂದೆ ಕಾಡಾನೆಗಳ ಹಾವಳಿಯಿಂದ ಬೇಸತ್ತ ರೈತರು ತಮ್ಮ ತೋಟಗಳಿಗೆ ಸೋಲಾರ್ ವಿದ್ಯುತ್ ಬೇಲಿಗಳನ್ನು ಅಳವಡಿಸಿಕೊಂಡ ಬಳಿಕ ಆನೆಗಳು ಬಿಕ್ಕೋಡು, ಚೀಕನಹಳ್ಳಿ ಹಾಗೂ ಮೂಡಿಗೆರೆ ಭಾಗಗಳತ್ತ ತೆರಳಿದ್ದವು. ಆದರೆ ಕಳೆದ ಒಂದು ವಾರದಿಂದ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಮತ್ತೆ ಈ ಭಾಗದಲ್ಲಿ ಕಾಣಿಸಿಕೊಂಡು ಜನರ ನಿದ್ದೆ ಕದಡಿದೆ.
ಆರಂಭದಲ್ಲಿ ಸೋಲಾರ್ ಬೇಲಿಯನ್ನು ದಾಟಲು ಹಿಂದೇಟು ಹಾಕುತ್ತಿದ್ದ ಆನೆಗಳು ಈಗ ಹೊಸ ತಂತ್ರಗಳನ್ನು ಅನುಸರಿಸುತ್ತಿವೆ. ತಂತಿಗಳ ಮೇಲೆ ಒಣಗಿದ ಮರಗಳು ಅಥವಾ ಕಾಫಿ ಗಿಡಗಳನ್ನು ಕೆಡವಿ ವಿದ್ಯುತ್ ಬೇಲಿಯನ್ನು ದಾಟುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಕೆಲವು ಆನೆಗಳು ಮೊದಲು ತಂತಿಯಲ್ಲಿ ವಿದ್ಯುತ್ ಹರಿಯುತ್ತಿದೆಯೇ ಎಂದು ಪರಿಶೀಲಿಸಿ ಬಳಿಕ ಬೇಲಿಯನ್ನು ದಾಟುತ್ತಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಶಿವಂ ಅಸೋಸಿಯೇಟ್ಸ್ ಪ್ರಕರಣದ ಬೆನ್ನೆಲೆ ; ಚಿತ್ರರಂಗದ ತಾರೆಯರಿಂದಲೂ ಮಾಹಿತಿ ಸಂಗ್ರಹಕ್ಕೆ ಸಿಐಡಿ ಚಿಂತನೆ