newsics.com | ನ್ಯೂಸಿಕ್ಸ್
ಮೀರತ್ (ಉತ್ತರ ಪ್ರದೇಶ): ಜಿಲ್ಲೆಯ ಹಸ್ತಿನಾಪುರದಲ್ಲಿ ನಡೆದ ಶಾಲಾ ಆಡಳಿತಾಧಿಕಾರಿ ಅತುಲ್ ಕುಮಾರ್ (32) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹಾವು ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿಸಲಾಗಿತ್ತು. ಆದರೆ, ಪತಿಯ ಸಾವಿನ ಹಿಂದೆ ಪತ್ನಿ ದಾಮಿನಿ (30) ಹಾಗೂ ಆಕೆಯ ಪ್ರಿಯಕರ ತುಷಾರ್ (ಶಾಲಾ ವ್ಯಾನ್ ಚಾಲಕ) ಇರುವುದಾಗಿ ಮೃತ ಅತುಲ್ ಸಂಬಂಧಿಕರು ಆರೋಪಿಸಿದ್ದಾರೆ.
20 ಲಕ್ಷ ರೂ. ವಿಮಾ ಹಣದ ಆಸೆ ಹಿನ್ನೆಲೆಯಲ್ಲಿ ಪತ್ನಿ ದಾಮಿನಿ ತನ್ನ ಪ್ರಿಯಕರ ತುಷಾರ್ ಜತೆಗೂಡಿ ಅತುಲ್ ಕುಮಾರ್ನನ್ನು ಮುಗಿಸಲು ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸಾವಲ್ಲ, ಪತ್ನಿಯಿಂದಲೇ ಕೊಲೆ:
ಪುತ್ರನದ್ದು ಅನುಮಾನಾಸ್ಪದ ಸಾವಲ್ಲ. ಇದೊಂದು ಪೂರ್ವನಿಯೋಜಿತ ಕೊಲೆ. ಅಕ್ರಮ ಸಂಬಂಧ ಹಿನ್ನೆಲೆ ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿಯೇ ತನ್ನ ಸ್ವಂತ ಪತಿಯನ್ನು ಕೊಲೆ ಮಾಡಿದ್ದಾಳೆ. ಕೊಲೆಗೂ ಮುನ್ನ ಹಲವು ಸಂಚುಗಳನ್ನು ಹೆಣೆದಿದ್ದರು ಎಂದು ಮೃತ ಅತುಲ್ ಸಂಬಂಧಿಕರು ಆರೋಪಿಸಿ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಲ್ವರ ಬಂಧನ:
ಈ ದೂರಿನ ಹಿನ್ನೆಲೆಯಲ್ಲಿ ಮೃತನ ಪತ್ನಿ ದಾಮಿನಿ, ಆಕೆಯ ಪ್ರೇಮಿ ತುಷಾರ್ ಮತ್ತು ಇಬ್ಬರು ಹಾವಾಡಿಗರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರೀತಿಸಿ ವಿವಾಹವಾಗಿದ್ದ ದಂಪತಿ:
ಬಹ್ಸುಮಾ ಪೊಲೀಸ್ ಠಾಣಾ ವ್ಯಾಪ್ತಿಯ ಭಂಡೋರಾ ಗ್ರಾಮದ ನಿವಾಸಿಯಾಗಿದ್ದ ಅತುಲ್ ಕುಮಾರ್ ಹಸ್ತಿನಾಪುರದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ದಾಮಿನಿ ಮತ್ತು ಆರು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದರು.
ಅತುಲ್ ಮತ್ತು ದಾಮಿನಿ ಕಳೆದ ಏಳು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ, ಅವರು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ “ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್” ಎಂಬ ಮಕ್ಕಳ ಶಾಲೆ ನಡೆಸುತ್ತಿದ್ದರು. ಇಲ್ಲಿ ಸುಮಾರು 150 ಮಕ್ಕಳು ಕಲಿಯುತ್ತಿದ್ದರು. ತುಷಾರ್ ಇಲ್ಲಿ ಶಾಲಾ ವ್ಯಾನ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅತುಲ್ ಅವರ ಶವ ಅವರ ಕೋಣೆಯಲ್ಲಿನ ಹಾಸಿಗೆಯ ಮೇಲೆ ಪತ್ತೆಯಾಗಿತ್ತು. ದಾಮಿನಿ ಮತ್ತು ಅವರ ಕುಟುಂಬದ ಸದಸ್ಯರು ತಕ್ಷಣ ಅತುಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದರು. ಸುದ್ದಿ ತಿಳಿದು ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದರು.
ಆರಂಭಿಕ ವಿಚಾರಣೆಯ ಸಮಯದಲ್ಲಿ, ದಾಮಿನಿ ಪೊಲೀಸರನ್ನು ದಾರಿ ತಪ್ಪಿಸಲು ತನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದಳು. ಸೆಕೆ ಹಿನ್ನೆಲೆಯಲ್ಲಿ ನಾನು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನನ್ನ ಮಗನಿದ್ದ ಮತ್ತೊಂದು ಕೋಣೆಗೆ ಬಂದು ಮಲಗಿದ್ದೆ. ಬೆಳಗ್ಗೆ ನಾನು ಚಹಾ ನೀಡಲು ಅತುಲ್‌ನ ಕೋಣೆಗೆ ಹೋದಾಗ, ಕಂಬಳಿ ಹೊದ್ದುಕೊಂಡು ಮಲಗಿದ್ದ. ಕರೆದಾಗ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಕಂಬಳಿ ತೆಗೆದಾಗ ಅಲ್ಲಿ ಕಪ್ಪು ಹಾವಿತ್ತು. ಅತುಲ್‌ನ ಬಲಗಾಲಿನಲ್ಲಿ ಹಾವು ಕಚ್ಚಿದ ಗುರುತು ಕೂಡ ಇತ್ತು ಎಂದು ದಾಮಿನಿ ಹೇಳಿಕೆ ನೀಡಿದ್ದಳು. ಇದು ಮೃತ ಅತುಲ್ ಪೋಷಕರಲ್ಲಿ ಅನುಮಾನ ಮೂಡಿಸಿತ್ತು.
ತಕ್ಷಣವೇ ಪೊಲೀಸರಿಗೆ ದೂರು ನೀಡಿ, ಇದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದವು.
ಸತ್ಯ ಬಾಯ್ಬಿಟ್ಟ ಆರೋಪಿಗಳು:
ತನಿಖಾ ಭಾಗವಾಗಿ ದಾಮಿನಿಯ ಮೊಬೈಲ್ ಕರೆ ವಿವರಗಳನ್ನು (CDR) ಪರಿಶೀಲಿಸಿದಾಗ, ಆಕೆ ತನ್ನ ಶಾಲೆಯ ವ್ಯಾನ್ ಚಾಲಕ ತುಷಾರ್ ಜತೆ ಆಗಾಗ ಸಂವಹನ ನಡೆಸುತ್ತಿದ್ದಳು ಎನ್ನುವುದು ಗೊತ್ತಾಯಿತು.
ತುಷಾರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಕೃತ್ಯದ ಭಯಾನಕ ಕಥಾವಸ್ತುವನ್ನು ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಮಿನಿ ಮತ್ತು ತುಷಾರ್ ಪ್ರೇಮ ಸಂಬಂಧದಲ್ಲಿದ್ದರು. ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದರು.
ಅತುಲ್ ಈ ಹಿಂದೆ ಕಂಪ್ಯೂಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಅವನಿಗೆ 20 ಲಕ್ಷ ರೂಪಾಯಿಗಳ ವಿಮೆ ಇತ್ತು. ದಾಮಿನಿ ಮತ್ತು ತುಷಾರ್ ಅತುಲ್‌ನನ್ನು ಕೊಂದು ಈ ವಿಮಾ ಹಣವನ್ನು ಕಬಳಿಸಲು ಸಂಚು ಹೂಡಿದ್ದರು. ಅಂದುಕೊಂಡಂತೆ ಆದಲ್ಲಿ ಬಳಿಕ ತಾವಿಬ್ಬರೂ ಮದುವೆಯಾಗುವುದಾಗಿ ತೀರ್ಮಾನಿಸಿದ್ದರು. ಈ ಹಿಂದೆ, ಆರೋಪಿಗಳು ಅತುಲ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತದಲ್ಲಿ ಕೊಲ್ಲಲು ಪ್ರಯತ್ನಿಸಿದ್ದರು. ಆದರೆ, ಅತುಲ್ ಬದುಕುಳಿದಿದ್ದ.
ಗುರುವಾರ ರಾತ್ರಿ, ದಾಮಿನಿ ಅತುಲ್‌ಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಿಕೊಟ್ಟಿದ್ದರು. ಇದರಿಂದಾಗಿ ಅತುಲ್ ಪ್ರಜ್ಞೆ ತಪ್ಪಿದ್ದ. ನಂತರ ತುಷಾರ್ ಇಬ್ಬರು ಹಾವಾಡಿಗರಿಂದ ಖರೀದಿಸಿದ ವಿಷಪೂರಿತ ಹಾವನ್ನು ತಂದು ಅತುಲ್ ಬಳಿ ಬಿಟ್ಟಿದ್ದಾರೆ.
ಇದರ ಹಿಂದಿನ ಕಥಾ ನಾಯಕಿ ದಾಮಿನಿ ಮಧ್ಯ ರಾತ್ರಿ ಗಂಡನ ರೂಮಿನಿಂದ ಬೇರೆ ರೂಮಿಗೆ ಬಂದು ಮಲಗಿದ್ದಾರೆ. ಈ ವೇಳೆ ಹಾವು ಕಚ್ಚಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಮಾತನಾಡಿ, ಹಸ್ತಿನಾಪುರ ಪೊಲೀಸ್ ಠಾಣೆಗೆ ಅತುಲ್ ಪವಾರ್ ಎಂಬ ವ್ಯಕ್ತಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿತು. ಹೋಗಿ ಪರಿಶೀಲಿಸಿದಾಗ ಅತುಲ್ ಮಲಗಿದ್ದ ಹಾಸಿಗೆಯಲ್ಲಿ ಹಾವು ಪತ್ತೆಯಾಗಿದೆ. ಹಾವು ಕಡಿತದಿಂದ ಅತುಲ್ ಸತ್ತಿದ್ದಾನೆಂದು ಹೇಳಿಕೆ ನೀಡಿದ್ದರು. ಆದರೆ, ಸಂದರ್ಭಗಳು ಮತ್ತು ಹಾವಿನ ನಡವಳಿಕೆಯನ್ನು ಗಮನಿಸಿದರೆ, ಅದು ತುಂಬಾ ನಾಚಿಕೆ ಸ್ವಭಾವದ ಪ್ರಾಣಿಯಾಗಿರುವುದರಿಂದ, ಅದು ಬೆಡ್ ಶೀಟ್ ಒಳಗೆ ಬಂದು ಕಚ್ಚುವುದು ಸಿನಿಮೀಯ ಕಥೆ ಅನ್ನಿಸಿತು. ಅಲ್ಲದೇ, ಹೇಳಿಕೆ ಹಾಗೂ ಸಂಗತಿಗಳು ಹೊಂದಿಕೆಯಾಗಲಿಲ್ಲ. ಆಳ ತನಿಖೆಗೆ ಇಳಿದಾಗ ಇದು ದಾಮಿನಿ ಮತ್ತು ತುಷಾರ್ ನಡುವಿನ ಅಕ್ರಮ ಸಂಬಂಧದ ಹಿನ್ನೆಲೆ ಈ ಕೃತ್ಯ ನಡೆದಿರುವುದು ಮೇಲ್ನೋಟಕ್ಕೆ ತಿಳಿದುಬಂದಿತು.
ಅನುಮಾನದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣದ ಸತ್ಯಾಂಶ ಬಹಿರಂಗವಾಗಿದೆ. ತುಷಾರ್ ಅವರ ಮೊಬೈಲ್ ಫೋನ್‌ನಿಂದ ಹಾವಿನ ಫೋಟೋವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮೃತರಿಗೆ 20 ಲಕ್ಷ ರೂಪಾಯಿಗಳ ವಿಮಾ ಹಣ ಇದ್ದು, ಈ ಹಣವನ್ನು ವಶಪಡಿಸಿಕೊಳ್ಳಲು ಆರೋಪಿಗಳು ಸಂಚು ಹೂಡಿದ್ದರು ಎನ್ನುವುದು ಕೂಡ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು
Health Tips ಆಲೂಗಡ್ಡೆ ಹಸಿರಾಗಿದ್ದರೆ ಅಡುಗೆಗೆ ಬಳಸಬೇಡಿ; ಅದರಲ್ಲಿರತ್ತೆ ಡೇಂಜರಸ್ ವಿಷಕಾರಿ ಅಂಶ