newsics.com | ನ್ಯೂಸಿಕ್ಸ್
ಹೈದರಾಬಾದ್ : ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್ ಯುವತಿಯೊಬ್ಬರ ನಿಗೂಢ ಸಾವಿನ ಪ್ರಕರಣವು ಎಲ್ಲರನ್ನೂ ದಿಗ್ಭ್ರಮೆಗೊಳಿಸುವಂಥ ವಿಚಿತ್ರ ತಿರುವು ಪಡೆದುಕೊಂಡಿದೆ.
ಆ ಯುವತಿಯು ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ, ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗಿ, ಕೆರೆಗೆ ಜಿಗಿದು ಸಾವನ್ನಪ್ಪಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.
ಮೃತ ಯುವತಿಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ತೇಜಸ್ವಿನಿ ಇದ್ದಕ್ಕಿದ್ದಂತೆ ತನ್ನ ಎಲ್ಲ ಬಟ್ಟೆಗಳನ್ನು ಕಳಚಿ, ಬೆತ್ತಲೆಯಾಗಿಯೇ ಸಮೀಪದ ದೇವಸ್ಥಾನಕ್ಕೆ ಓಡಿಹೋಗಿದ್ದಾಳೆ. ಅಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಮ್ಮಾವರ (ದೇವತೆ) ವಿಗ್ರಹವನ್ನು ಎತ್ತಿ, ಕೈಯಲ್ಲಿ ಹಿಡಿದುಕೊಂಡು ಓಡಿ ಬಂದು ನೇರವಾಗಿ ಹತ್ತಿರದ ಕೆರೆಗೆ ಧುಮುಕಿದ್ದಾಳೆ. ಬಳಿಕ ಆಕೆಯ ಮೃತದೇಹ ಪತ್ತೆಯಾಗಿದೆ. ಆದರೆ ನೀರಿನಲ್ಲಿ ಆಕೆ ಕೊಂಡೊಯ್ದಿದ್ದ ದೇವಿಯ ವಿಗ್ರಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ವಿಪತ್ತು ನಿರ್ವಹಣಾ ಪಡೆ (DRF) ದೋಣಿಗಳ ಮೂಲಕ ಕೆರೆಯಲ್ಲಿ ವಿಗ್ರಹಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.
ಈ ವಿಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೇಜಸ್ವಿನಿ ಅವರ ತಾಯಿ ಅರುಣಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ತೇಜಸ್ವಿನಿ ತಂಗಿದ್ದ ಬಾಡಿಗೆ ಫ್ಲಾಟ್‌ಗೆ ಸಂಬಂಧಿಸಿದಂತೆ ಹಲವು ಅನುಮಾನಾಸ್ಪದ ಸಂಗತಿಗಳು ಹೊರಬಂದಿವೆ. ಆಕೆ ದಿನಕ್ಕೆ ಸುಮಾರು 3,500 ರೂಪಾಯಿ ಬಾಡಿಗೆ ಪಾವತಿಸುತ್ತಿದ್ದು, ತಿಂಗಳಿಗೆ ಹತ್ತಿರಹತ್ತಿರ 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಆಕೆ ವಾಸವಿದ್ದ ಕಟ್ಟಡದ ಮೇಲಿನ ಎರಡು ಮಹಡಿಗಳನ್ನು ಲಾಡ್ಜ್ ಮಾದರಿಯಲ್ಲಿ ನಡೆಸಲಾಗುತ್ತಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದ್ದು, ಈ ಆರ್ಥಿಕ ಹೊರೆ ಹಾಗೂ ಪರಿಸರಕ್ಕೂ ಆಕೆಯ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ, ಯುವತಿ ಇಂತಹ ವಿಲಕ್ಷಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಘಟನೆಗೆ ಮುನ್ನ ಆಕೆ ಬರೆದಿದ್ದಾಳೆನ್ನಲಾದ ಮರಣ ಪತ್ರ, ಇತ್ತೀಚಿನ ಆರ್ಥಿಕ ವಹಿವಾಟುಗಳು ಮತ್ತು ಆಕೆಯ ನಡೆದಾಟದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
https://www.newsics.com/2026/07/19/p-v-sindhu-record-at-japan/