newsics.com | ನ್ಯೂಸಿಕ್ಸ್
ಪಾಟ್ನಾ: ನಕಲಿ ಪದವಿ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ 3,035 ಶಾಲಾ ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸಲು ಬಿಹಾರ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಜಾಗೃತ ದಳ (ವಿಜಿಲೆನ್ಸ್ ಬ್ಯೂರೋ) ನಡೆಸಿದ ಸುದೀರ್ಘ ತನಿಖೆಯಿಂದ ಈ ಬೃಹತ್ ವಂಚನೆ ಬೆಳಕಿಗೆ ಬಂದಿದೆ.
2006 ರಿಂದ 2015 ರ ಅವಧಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಸಾಬೀತಾಗಿದೆ. ಈ ಸಂಬಂಧ ಈಗಾಗಲೇ 1,830 ಎಫ್‌ಐಆರ್ (FIR) ದಾಖಲಾಗಿವೆ. ಕೆಲಸದಿಂದ ತೆಗೆದುಹಾಕುವುದು ಮಾತ್ರವಲ್ಲದೆ, ಇಷ್ಟು ವರ್ಷ ಅವರು ಸರ್ಕಾರದಿಂದ ಪಡೆದ ಸಂಬಳವನ್ನು ಬಡ್ಡಿ ಸಮೇತ ವಾಪಸ್ ವಸೂಲಿ ಮಾಡಲು ಇಲಾಖೆ ನಿರ್ಧರಿಸಿದೆ. ಅಲ್ಲದೆ, ಕಾನೂನು ಕ್ರಮದ ಭಯದಿಂದ ಕೆಲವು ಶಿಕ್ಷಕರು ಮೊದಲೇ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ನೀಡಿದವರನ್ನೂ ಬಿಡುವುದಿಲ್ಲ, ಎಲ್ಲರ ಮೇಲೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.