newsics.com| ನ್ಯೂಸಿಕ್ಸ್
ಬರೋಬ್ಬರಿ 116 ವರ್ಷ ವಯಸ್ಸಿನ ನವನೀತಮ್ಮ ಎಂಬ ವಯೋವೃದ್ಧೆ ಯಾರ ನೆರವೂ ಇಲ್ಲದೆ, ಕೇವಲ ಭಕ್ತಿಯ ಬಲದಿಂದ ತಿರುಪತಿ ಬೆಟ್ಟದ 3,500 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲೇ ಏರುವ ಮೂಲಕ ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿ ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ ಅವರಿಗೆ ಸ್ವತಃ ಟಿಟಿಡಿ ವಿವಿಐಪಿಗಳಿಗೆ ನೀಡುವ ವಿಶೇಷ ದರ್ಶನ ಭಾಗ್ಯ ಕರುಣಿಸಿ ತಿರುಪತಿ ತಿಮ್ಮಪ್ಪನನ್ನು ಅತ್ಯಂತ ಹತ್ತಿರದಿಂದ ನೋಡುವ ಭಾಗ್ಯವನ್ನು ಕರುಣಿದೆ. ಈ ಮೂಲಕ ಅಜ್ಜಿಯ ಜನ್ಮ ಪಾವನವಾಗುವಂತೆ ಮಾಡಿದೆ. ಜತೆಗೆ ಅಜ್ಜಿಯನ್ನು ಸನ್ಮಾನಿಸಿದೆ.
ನವನೀತಮ್ಮ ಅವರು ತಿರುಮಲ ಬೆಟ್ಟದ ಅತ್ಯಂತ ಕಠಿಣ ಪಾದಚಾರಿ ಮಾರ್ಗವಾದ ‘ಅಲಿಪಿರಿ’ ಮೂಲಕ ಯಾವುದೇ ವಿಶೇಷ ಸೌಲಭ್ಯ ಅಥವಾ ಇತರರ ಭೌತಿಕ ಸಹಾಯವನ್ನು ಪಡೆಯದೆ ಸ್ವತಂತ್ರವಾಗಿ ಹೆಜ್ಜೆ ಇಡುತ್ತಾ 3,500 ಮೆಟ್ಟಿಲುಗಳನ್ನು ಹತ್ತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ತಲುಪಿದ್ದಾರೆ. ಮೆಟ್ಟಿಲು ಹತ್ತುವಾಗ ಇವರು ತಮ್ಮ ಕುಟುಂಬಸ್ಥರ ಜೊತೆ ನಿರರ್ಗಳವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಹೀಗಾಗಿ ಆರಂಭದಲ್ಲಿ ಇವರು ಕರ್ನಾಟಕ ಮೂಲದವರು ಎಂದೇ ಭಾವಿಸಲಾಗಿತ್ತು. ಆದರೆ, ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಟಿಟಿಡಿ (TTD) ಅಧ್ಯಕ್ಷರಾದ ಬಿ. ಆರ್. ನಾಯ್ಡು ಅವರು ಮಾಹಿತಿ ಕಲೆ ಹಾಕಿದ್ದು, ಅಜ್ಜಿ ಕನ್ನಡ ಮಾತನಾಡಿದರೂ ಮೂಲತಃ ತಮಿಳುನಾಡು ಮೂಲದವರಾಗಿದ್ದು, ಸದ್ಯ ತಿರುಪತಿಯ ‘ಜೀವಕೋಣ’ ಎಂಬಲ್ಲಿ ನೆಲೆಸಿದ್ದಾರೆ ಎಂಬ ಆಸಕ್ತಿದಾಯಕ ವಿಚಾರ ಬೆಳಕಿಗೆ ಬಂದಿದೆ.
ಅಜ್ಜಿಯ ಅಪ್ರತಿಮ ಭಕ್ತಿ ಮತ್ತು ಸಾಹಸದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ತಕ್ಷಣವೇ ಅವರ ಕುಟುಂಬವನ್ನು ಸಂಪರ್ಕಿಸಿದರು. ಸ್ವತಃ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಸೂಚನೆ ಮೇರೆಗೆ ಸೋಮವಾರ ನವನೀತಮ್ಮ ಹಾಗೂ ಅವರ ಇಡೀ ಕುಟುಂಬಕ್ಕೆ ಅತ್ಯಂತ ಗೌರವಾನ್ವಿತ ವಿಶೇಷ ವಿಐಪಿ ಬ್ರೇಕ್ ದರ್ಶನ ವ್ಯವಸ್ಥೆ ಕಲ್ಪಿಸಲಾಯಿತು.
ದರ್ಶನದ ಬಳಿಕ ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಇಒ (EO) ಶ್ರೀ ಮುದ್ದದ ರವಿಚಂದ್ರ ಅವರು ವೇದ ವಿದ್ವಾಂಸರ ಸಮ್ಮುಖದಲ್ಲಿ ಅಜ್ಜಿಗೆ ರೇಷ್ಮೆ ಬಟ್ಟೆ ಹೊದಿಸಿ, ಪವಿತ್ರ ಶ್ರೀವಾರಿ ಪ್ರಸಾದವನ್ನು ನೀಡಿ ಗೌರವಿಸಿದರು. ಈ ವೇಳೆ ಇಒ ಅವರು ವಯಸ್ಸಿನಲ್ಲಿ ತಮಗಿಂತ ಹಿರಿಯರಾದ ನವನೀತಮ್ಮ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅಜ್ಜಿಯ ಮೊಮ್ಮಗ ದಿಕ್ಪತಿ ಮಾಧ್ಯಮಗಳೊಂದಿಗೆ ಮಾತನಾಡಿ, “ನಮ್ಮ ಅಜ್ಜಿಯ ಜೀವಮಾನದ ಆಸೆಯನ್ನು ಈಡೇರಿಸಿದ್ದಕ್ಕಾಗಿ ಮತ್ತು ನಮ್ಮ ಇಡೀ ಕುಟುಂಬಕ್ಕೆ ಭಗವಂತನ ದರ್ಶನದ ಭಾಗ್ಯ ಕಲ್ಪಿಸಿಕೊಟ್ಟಿದ್ದಕ್ಕಾಗಿ ಟಿಟಿಡಿ ಮಂಡಳಿ ಹಾಗೂ ಅಧ್ಯಕ್ಷರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು,” ಎಂದು ಭಾವುಕರಾಗಿ ನುಡಿದರು.
ನವನೀತಮ್ಮ ಅವರ ಈ ಅದ್ಭುತ ಭಕ್ತಿಯ ಪಯಣ ರಾಜಕೀಯ ಗಣ್ಯರ ಗಮನವನ್ನೂ ಸೆಳೆದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಬರೆದುಕೊಂಡಿದ್ದಾರೆ. “ಭಕ್ತಿಯ ವಿಚಾರಕ್ಕೆ ಬಂದಾಗ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಈ 116 ವರ್ಷದ ಅಜ್ಜಿ ಸಾಬೀತುಪಡಿಸಿದ್ದಾರೆ. ಕರ್ನಾಟಕದ ಈ 116 ವರ್ಷದ ಅಜ್ಜಿ ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ನಡೆದು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಅವರ ಕುಟುಂಬವು ಅವರನ್ನು ಬೆಂಬಲಿಸುತ್ತಿರುವುದನ್ನು ನೋಡುವುದು ಅದ್ಭುತ. ನಿಜವಾಗಿಯೂ ಸ್ಪೂರ್ತಿದಾಯಕ.
ವೈರಲ್ ಆದ ಒಂದೇ ಒಂದು ವಿಡಿಯೋದಿಂದಾಗಿ ನೆಟ್ಟಿಗರು, ಟಿಟಿಡಿ ಅಧಿಕಾರಿಗಳು ಹಾಗೂ ಸಿಎಂ ವರೆಗೆ ಎಲ್ಲರ ಹೃದಯ ಗೆದ್ದ ನವನೀತಮ್ಮ ಅವರ ಕಥೆ, ಭಕ್ತಿ ಮತ್ತು ದೈಹಿಕ ಸಾಮರ್ಥ್ಯಕ್ಕೆ ಮನಸ್ಸಿನ ಶಕ್ತಿಯೇ ಅಂತಿಮ ಮದ್ದು ಎಂಬುದನ್ನು ಇಡೀ ಜಗತ್ತಿಗೆ ಸಾರಿದೆ.
Tender coconut trouble ಎಳನೀರಿನಿಂದ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು