newsics.com | ನ್ಯೂಸಿಕ್ಸ್
ಟೆಹ್ರಾನ್: ಇರಾನ್‌ನ ಸರ್ವೋಚ್ಚ ಮುಖಂಡ ಆಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಅಂತ್ಯಕ್ರಿಯೆಯ ವಿಧಿವಿಧಾನಗಳು ಸುದೀರ್ಘ ಕಾಯುವಿಕೆಯ ನಂತರ ಆರಂಭಗೊಂಡಿವೆ. ಕಳೆದ ಫೆಬ್ರವರಿ 28 ರಂದು ನಡೆದ ಅಮೆರಿಕ ಹಾಗೂ ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಆ ವೇಳೆ ಉಂಟಾಗಿದ್ದ ಯುದ್ಧದ ಪರಿಸ್ಥಿತಿಯಿಂದಾಗಿ ಅವರ ಭೌತಿಕ ಶರೀರವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ಕಳೆದ ನಾಲ್ಕು ತಿಂಗಳುಗಳಿಂದ ಅತ್ಯಂತ ರಹಸ್ಯ ಹಾಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿತ್ತು. ಈಗ ಉದ್ವಿಗ್ನತೆ ತಿಳಿಯಾಗಿದ್ದು, ಸರ್ಕಾರ ಅಂತಿಮ ನಮನ ಸಲ್ಲಿಸಲು ಮುಂದಾಗಿದೆ.
ಒಂದು ವಾರದ ಕಾಲ ಜರುಗಲಿರುವ ಈ ಐತಿಹಾಸಿಕ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಸುಮಾರು ಎರಡು ಕೋಟಿಗೂ ಅಧಿಕ ಜನಸ್ತೋಮ ಹರಿದುಬರುವ ಅಂದಾಜಿದೆ. ಇದೇ ಈಗ ಇರಾನ್ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಪರೀತ ಬಿಸಿಲು ಮತ್ತು ಅತಿಯಾದ ಜನದಟ್ಟಣೆಯಿಂದಾಗಿ ಜಾಗತಿಕ ಮಟ್ಟದ ಭೀಕರ ಕಾಲ್ತುಳಿತ ಸಂಭವಿಸುವ ಅಪಾಯವಿದ್ದು, ಕನಿಷ್ಠ 1,500 ರಿಂದ 3,000 ನಾಗರಿಕರು ಮೃತಪಡಬಹುದು ಎಂದು ಅಲ್ಲಿನ ಅಧಿಕಾರಿಗಳೇ ಭವಿಷ್ಯ ನುಡಿದಿದ್ದಾರೆ.
ದೇಶದ ಮೊದಲ ಉಪಾಧ್ಯಕ್ಷ ಮೊಹಮ್ಮದ್-ರೆಜಾ ಅರೆಫ್ ಅವರಿಗೆ ಇರಾನಿನ ರೆಡ್ ಕ್ರೆಸೆಂಟ್ ಮತ್ತು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಂಸ್ಥೆಯು ರವಾನಿಸಿರುವ ರಹಸ್ಯ ಪತ್ರದಲ್ಲಿ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ಜನರನ್ನು ನಿಯಂತ್ರಿಸುವುದು ಅಸಾಧ್ಯದ ಮಾತು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಮಹಾ ದುರಂತ ನಿಶ್ಚಿತ ಎಂದು ಆ ಪತ್ರದಲ್ಲಿ ಎಚ್ಚರಿಸಲಾಗಿದೆ.
ದುರಂತದ ಶಂಕೆ: ಮುಂಚಿತವಾಗಿಯೇ ಸಮಾಧಿಗಳ ನಿರ್ಮಾಣ!
ಸಂಭವನೀಯ ವಿಪತ್ತನ್ನು ಎದುರಿಸಲು ಇರಾನ್ ಸರ್ಕಾರ ಹಿಂದೆಂದೂ ಕಾಣದಂತಹ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಂದು ವೇಳೆ ಸಾಮೂಹಿಕ ಸಾವು-ನೋವುಗಳು ಸಂಭವಿಸಿದರೆ, ಮೃತದೇಹಗಳ ತಕ್ಷಣದ ವಿಲೇವಾರಿ ಹಾಗೂ ಕಾಣೆಯಾದವರ ಪತ್ತೆಗಾಗಿ ವಿಶೇಷ ತುರ್ತು ಕಾರ್ಯಪಡೆಯನ್ನು ರಚಿಸಲಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಅಂತಿಮಯಾತ್ರೆ ಶುರುವಾಗುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಬರೋಬ್ಬರಿ 3,000 ಸಮಾಧಿಗಳನ್ನು ಮುಂಚಿತವಾಗಿಯೇ ತೋಡಿ ಸಿದ್ಧವಾಗಿಡಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಡೀ ದೇಶದ ವೈದ್ಯಕೀಯ ಮತ್ತು ಸೇನಾ ಸಿಬ್ಬಂದಿಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದ್ದರೂ, ಇರಾನ್ ಇತಿಹಾಸದಲ್ಲೇ ಅತ್ಯಂತ ಭೀತಿ ಹುಟ್ಟಿಸುವ ಸನ್ನಿವೇಶಕ್ಕೆ ಇಡೀ ಜಗತ್ತು ಸಾಕ್ಷಿಯಾಗುವಂತಿದೆ.
PM Modi ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ: ಅಧ್ಯಕ್ಷ ಟ್ರಂಪ್‌ಗೆ ಪ್ರಧಾನಿ ಮೋದಿ ವಿಶೇಷ ಶುಭಾಶಯ