newsics.com| ನ್ಯೂಸಿಕ್ಸ್
ಇತ್ತೀಚೆಗೆ, ಇ20 ಪೆಟ್ರೋಲ್ ಉಪಯೋಗದ ಬಗ್ಗೆ ಅನೇಕ ವಾಹನ ಸವಾರರು ಕಳವಳ ವ್ಯಕ್ತಪಡಿಸಿದ್ದರು. E20 ಪೆಟ್ರೋಲ್ ಬಳಸಿದರೆ ವಾಹನದ ಎಂಜಿನ್ ಹಾನಿಯಾಗುತ್ತದೆ, ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಹಾಗೂ ವಾಹನದ ವಿಮೆ ಅನ್ವಯಿಸುವುದಿಲ್ಲ ಎಂಬ ರೀತಿಯ ಸಂದೇಶಗಳು ಮತ್ತು ವಿಡಿಯೊಗಳು ವೈರಲ್ ಆಗಿವೆ. ಈ ಎಲ್ಲ ಸುದ್ದಿಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಸಂಪೂರ್ಣ ಸುರಕ್ಷಿತವಾಗಿದ್ದು, ಅನೇಕ ವೈಜ್ಞಾನಿಕ ಪರೀಕ್ಷೆಗಳ ಬಳಿಕವೇ ಇದನ್ನು ಅನುಮೋದಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜನರಲ್ಲಿ ಅನಗತ್ಯ ಭಯ ಮತ್ತು ಗೊಂದಲ ಸೃಷ್ಟಿಸಲು ಕೆಲವು ವ್ಯಕ್ತಿಗಳು ಯಾವುದೇ ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿದ್ದು, ಹಳೆಯ ಚಿತ್ರಗಳು ಮತ್ತು ವಿಡಿಯೊಗಳನ್ನು ಮತ್ತೆ ಹರಿಬಿಡುತ್ತಿದ್ದಾರೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2023ರಲ್ಲಿ E20 ಪೆಟ್ರೋಲ್ ಪರಿಚಯಿಸಿದ ನಂತರ ವಾಹನಗಳ ಎಂಜಿನ್ ವೈಫಲ್ಯ, ವಾಹನಗಳು ರಸ್ತೆಯಲ್ಲೇ ನಿಂತುಹೋಗುವುದು ಮುಂತಾದ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತದಲ್ಲಿ 2003ರಿಂದಲೇ ಎಥನಾಲ್ ಮಿಶ್ರಣ ಕಾರ್ಯಕ್ರಮ ಆರಂಭವಾಗಿದ್ದು, ಅದನ್ನು ಹಂತ ಹಂತವಾಗಿ ವಿಸ್ತರಿಸಲಾಗಿದೆ. ಈಗ ದೇಶಾದ್ಯಂತ E20 ಇಂಧನವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ.
E20 ಪೆಟ್ರೋಲ್ ಅನ್ನು ವಾಹನ ತಯಾರಿಕಾ ಕಂಪನಿಗಳ ತಾಂತ್ರಿಕ ಪರಿಶೀಲನೆ ಮತ್ತು ಸಮಾಲೋಚನೆಯ ನಂತರವೇ ಪರಿಚಯಿಸಲಾಗಿದೆ ಎಂದು ಸರ್ಕಾರ ಒತ್ತಿಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಕಬ್ಬಿನ ರಸವನ್ನು ನೇರವಾಗಿ ಪೆಟ್ರೋಲ್‌ಗೆ ಸೇರಿಸಲಾಗುವುದಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಹೇಳಿದೆ. ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವ ಮೊದಲು ಕಠಿಣ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಾಗುತ್ತದೆ. ಕಿಣ್ವೀಕರಣ ಮತ್ತು ಸ್ವೇದನ ಪ್ರಕ್ರಿಯೆಗಳ ಮೂಲಕ ಇಂಧನ-ದರ್ಜೆಯ ಎಥನಾಲ್ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಗಳ ಬಳಿಕ ಮೂಲ ಕೃಷಿ ಉತ್ಪನ್ನದೊಂದಿಗೆ ಯಾವುದೇ ಸಾಮ್ಯತೆ ಉಳಿಯುವುದಿಲ್ಲ ಎಂದು ಸರ್ಕಾರ ವಿವರಿಸಿದೆ.
ಭಾರತದಲ್ಲಿ ಎಥನಾಲ್ ಅನ್ನು ಕಬ್ಬಿನ ರಸ, ಮೊಲಾಸಿಸ್, ಒಡೆದ ಅಕ್ಕಿ ಹಾಗೂ ಜೋಳ ಸೇರಿದಂತೆ ಹಲವು ಮೂಲಗಳಿಂದ ಉತ್ಪಾದಿಸಲಾಗುತ್ತದೆ. ಕಿಣ್ವೀಕರಣ ಮತ್ತು ಸ್ವೇದನ ಪ್ರಕ್ರಿಯೆಗಳ ಮೂಲಕ ಇಂಧನ-ದರ್ಜೆಯ ಎಥನಾಲ್‌ನಲ್ಲಿರುವ ಸಕ್ಕರೆಯ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಆದ್ದರಿಂದ ಅದರಲ್ಲಿ ಸಕ್ಕರೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಎಥನಾಲ್‌ನಲ್ಲಿ ಸಾಮಾನ್ಯವಾಗಿ ಕೀಟಗಳನ್ನು ದೂರವಿಡುವ ಡೀನೇಚರೆಂಟ್‌ಗಳು ಸೇರಿಸಲಾಗುತ್ತವೆ. ಆದ್ದರಿಂದ E20 ಇಂಧನದಿಂದ ಚೀಟಿಗಳು ಅಥವಾ ಇತರ ಕೀಟಗಳು ವಾಹನದ ಫ್ಯೂಯೆಲ್ ಕ್ಯಾಪ್ ಸುತ್ತ ಸೇರುತ್ತವೆ ಎಂಬುದಕ್ಕೂ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದಲ್ಲದೆ, E20 ಪೆಟ್ರೋಲ್ ಬಳಸಿದರೆ ವಾಹನದ ವಿಮೆ ಅನ್ವಯಿಸುವುದಿಲ್ಲ ಎಂಬ ಸುದ್ದಿಯೂ ಸುಳ್ಳು. ವಾಹನದಲ್ಲಿ ಬಳಸುವ ಇಂಧನ ಮತ್ತು ವಿಮೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ. E20 ಪೆಟ್ರೋಲ್ ಬಳಸುವುದರಿಂದ ವಾಹನದ ಮೈಲೇಜ್ 20 ರಿಂದ 30 ಶೇಕಡಾ ಕುಸಿಯುತ್ತದೆ ಎಂಬ ಆರೋಪಗಳಿಗೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Vaibhav ಮ್ಯಾಂಚೆಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!