newsics.com| ನ್ಯೂಸಿಕ್ಸ್
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಧಾಳಿ ನಡೆಸಿರುವ ಘಟನೆ ಚಿಕ್ಕಮಂಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಈ ಘಟನೆಯನ್ನು ಕಂಡು ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಪುನೀತ್ ಎಂಬುವವನೇ ಈ ಕೃತ್ಯ ಎಸಗಿದ ಆರೋಪಿ. ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಕಡೂರು ಮೂಲದ ಬಾಲಕಿಯನ್ನು ಈತ ಕಳೆದ ಕೆಲವು ಸಮಯದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಅಪ್ರಾಪ್ತೆ ಈತನ ಕಿರುಕುಳಕ್ಕೆ ಬೇಸತ್ತು ಹೋಗಿದ್ದಳು. ಈತನ ಕಾಟ ಹೆಚ್ಚಾದ ಕಾರಣ ಬಾಲಕಿ ಹಾಸ್ಟೆಲ್‌ನಿಂದ ಹೊರಬರುವುದನ್ನು ನಿಲ್ಲಿಸಿದ್ದಳು. ಆದರೂ ಬಿಡದ ಆರೋಪಿ, ಪ್ರತಿದಿನ ಹಾಸ್ಟೆಲ್ ಬಳಿ ಬಂದು ಕಿರಿಕ್ ಮಾಡುತ್ತಿದ್ದ. ಇದರಿಂದ ಹಾಸ್ಟೆಲ್ ವಾರ್ಡನ್ ಬಾಲಕಿಗೆ ಎಚ್ಚರಿಕೆ ನೀಡಿದ್ದರು.
ಕುಟುಂಬಸ್ಥರಿಗೂ ಬೆದರಿಕೆ:
ಹುಚ್ಚು ಪ್ರೇಮಿಯ ಕಾಟ ತಾಳಲಾರದೆ ಬಾಲಕಿ ಕೆಲವು ದಿನಗಳ ಕಾಲ ತನ್ನ ಊರಿಗೆ ತೆರಳಿದ್ದಳು. ಅಷ್ಟಕ್ಕೂ ಸುಮ್ಮನಾಗದ ಆರೋಪಿ ಪುನೀತ್, ಬಾಲಕಿಯ ಪೋಷಕರ ಮೊಬೈಲ್ ಸಂಖ್ಯೆ ಪಡೆದುಕೊಂಡು ಅವರಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.. ಇದರಿಂದಾಗಿ ಬಾಲಕಿಯ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಾಗಿದ್ದರು.
ಕ್ರೀಡಾಂಗಣದಲ್ಲಿ ಭೀಕರ ಹಲ್ಲೆ:
ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿ (DC) ಹಾಗೂ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಬಳಿಯೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕಿ ಸಿಕ್ಕಾಗ, ಆರೋಪಿ ಅಲ್ಲಿಯೂ ತನ್ನನ್ನು ಪ್ರೀತಿಸುವಂತೆ ಧಮ್ಕಿ ಹಾಕಿದ್ದಾನೆ. ಬಾಲಕಿ ಎಂದಿನಂತೆ ನಿರಾಕರಿಸಿದಾಗ ಕುಪಿತಗೊಂಡ ಪುನೀತ್, ಏಕಾಏಕಿ ಆಕೆಯ ಮೇಲೆ ಎರಗಿ ಮನಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ಅಸಹಾಯಕ ಬಾಲಕಿಯನ್ನು ಕೆಳಗೆ ಕೆಡವಿ ಕಾಲಿನಿಂದ ಕ್ರೂರವಾಗಿ ತುಳಿದಿದ್ದಾನೆ ಎನ್ನಲಾಗಿದೆ. ಈ ಅನಿರೀಕ್ಷಿತ ದಾಳಿಯಿಂದ ಬಾಲಕಿ ಭಯಭೀತಳಾಗಿ ಕಿರುಚಾಡಿದ್ದಾಳೆ.
ಬಾಲಕಿಯ ಕಿರುಚಾಟ ಹಾಗೂ ಹಲ್ಲೆ ನಡೆಸುವುದನ್ನು ಕಂಡ ಸುತ್ತಮುತ್ತಲಿನ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಓಡಿ ಬಂದಿದ್ದಾರೆ. ಜನ ಸೇರುವುದನ್ನು ಗಮನಿಸಿದ ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ಬಿಡದೆ ಬೆನ್ನಟ್ಟಿ, ಎಸ್‌ಪಿ ನಿವಾಸದ ಮುಂಭಾಗದಲ್ಲೇ ಹಿಡಿದು ಮಹಿಳಾ ಪೊಲೀಸ್ ವಿಭಾಗಕ್ಕೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Mass loss of life ಜ್ಯುವೆಲರಿ ಮಳಿಗೆ ಮಾಲೀಕನಿಗೆ ಆರ್ಥಿಕ ಸಂಕಷ್ಟ: ಮೂವರ ಸಾಮೂಹಿಕ ಆತ್ಮ*ಹ*ತ್ಯೆ