newsics.com| ನ್ಯೂಸಿಕ್ಸ್
ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ಶಾಸಕ ಅನಿತಾ ಆರ್. ರಾಧಾಕೃಷ್ಣನ್ ಅವರನ್ನು ತಮಿಳುನಾಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಶಾಸಕರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಜೂನ್ 20 ರಂದು ತಿರುಚೆಂದೂರ್ ಸಮೀಪದ ಆತೂರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ರಾಧಾಕೃಷ್ಣನ್ ಭಾಷಣ ಮಾಡಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ವಿಜಯ್ ವಿರುದ್ಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಿನಿಮಾ ರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿರುವ ಮುಖ್ಯಮಂತ್ರಿ ವಿಜಯ್ ಅವರ ಶೈಲಿ ಹಾಗೂ ರೂಪವನ್ನು ಹಾಸ್ಯ ಮಾಡುವ ನಿಟ್ಟಿನಲ್ಲಿ ರಾಧಾಕೃಷ್ಣನ್ ಮಾತನಾಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಯ ಸಂದರ್ಭದಲ್ಲಿ ಡಿಎಂಕೆ ಶಾಸಕ ಎಸ್. ಆಸ್ಟಿನ್ ಅವರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದನ್ನು ಉಲ್ಲೇಖಿಸಿದ್ದ ರಾಧಾಕೃಷ್ಣನ್, “ಆಸ್ಟಿನ್ ಅವರು ಸಿಎಂ ಕಡೆಗೆ ಬೆರಳು ತೋರಿಸಿ ಮಾತನಾಡದಂತೆ ಕೇಳಿದಾಗ ಸಿಎಂ ಸಿಕ್ಕಿಬಿದ್ದವರಂತೆ ಕಂಡರು. ‘ನಾನು ಇಲ್ಲಿ ಹೇಗೆ ಸಿಲುಕಿಕೊಂಡೆ? ಮನೆಯಲ್ಲಿ ನಟಿಯೊಂದಿಗೆ ಎಷ್ಟು ಸಂತೋಷವಾಗಿದ್ದೆ, ಈಗ ಇಲ್ಲಿ ಸಿಲುಕಿಕೊಂಡಿದ್ದೇನೆ’ ಎಂದು ಅವರು ಯೋಚಿಸುವಂತಿತ್ತು” ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ವಿಧಾನಸಭೆಯಲ್ಲಿ ಸಿಎಂ ವರ್ತನೆಯನ್ನು ವ್ಯಾಪಾರಸ್ಥನ ಅಂಗಡಿಗೆ ಬರುವ ಗ್ರಾಹಕನಿಗೆ ಹೋಲಿಸಿ ಮಾತನಾಡಿದ್ದರು.
ಶಾಸಕರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್ ಅರ್ಜಿಯನ್ನು ವಜಾಗೊಳಿಸಿದರು. “ಜವಾಬ್ದಾರಿಯುತ ಶಾಸಕರಾಗಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅಲ್ಲದೆ, “ತಮಿಳುನಾಡಿನಲ್ಲಿ 1967 ರಿಂದಲೂ ಜನರು ಸಿನಿಮಾ ರಂಗದ ಹಿನ್ನೆಲೆಯುಳ್ಳ ನಾಯಕರನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಹಾಗಿರುವಾಗ ಇಂತಹ ಹೇಳಿಕೆಗಳ ಅಗತ್ಯವಿರಲಿಲ್ಲ. ನೀವು ಸಾಮಾನ್ಯ ವ್ಯಕ್ತಿಯಲ್ಲ, ವಿಧಾನಸಭೆಯ ಸದಸ್ಯರು” ಎಂದು ನ್ಯಾಯಾಲಯವು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.
ಶಾಸಕರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಡಿಎಂಕೆ ಸಂಸದೆ ಕನಿಮೊಳಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ರಾಧಾಕೃಷ್ಣನ್ ಅವರನ್ನು ಬಂಧಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇಂತಹ ದಮನಕಾರಿ ನೀತಿಗಳಿಗೆ ಡಿಎಂಕೆ ಎಂದಿಗೂ ತಲೆಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ