newsics.com | ನ್ಯೂಸಿಕ್ಸ್
ಧಾರವಾಡ: ಚಲಿಸುತ್ತಿದ್ದ ಬಸ್‌ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದ ಐಟಿಐ ವಿದ್ಯಾರ್ಥಿಯೊಬ್ಬನಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿದ್ದು, ತಲೆಯ ರುಂಡವೇ ಕತ್ತರಿಸಿ ರಸ್ತೆಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯಕುಂದಗೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಈ ಭೀಕರ ದುರಂತದಲ್ಲಿ ಕುಂದಗೋಳ ತಾಲ್ಲೂಕಿನ ಶಿರೂರು ಗ್ರಾಮದ ನಿವಾಸಿಯಾದ ಹದಿನೇಳು ವರ್ಷದ ಪಕ್ಕಿರೇಶ್ ಎಂಬ ಯುವಕ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಮೃತ ಯುವಕ ಹುಬ್ಬಳ್ಳಿಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದನು. ಎಂದಿನಂತೆ ಕಾಲೇಜು ಮುಗಿಸಿ ತನ್ನ ಗ್ರಾಮಕ್ಕೆ ಮರಳಲು ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ ಹತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪಕ್ಕಿರೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದನು. ಬಸ್ ಕುಂದಗೋಳ ಪಟ್ಟಣದ ಹೊರವಲಯದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಗುಟ್ಕಾ ಉಗುಳುವ ಉದ್ದೇಶದಿಂದ ಆತ ತನ್ನ ತಲೆಯನ್ನು ಕಿಟಕಿಯಿಂದ ಹೊರಗೆ ಹಾಕಿದ್ದಾನೆ. ದುರದೃಷ್ಟವಶಾತ್, ಇದೇ ಸಂದರ್ಭದಲ್ಲಿ ಬಸ್ಸಿನ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಕಿಟಕಿಯ ಹೊರಗಿದ್ದ ಪಕ್ಕಿರೇಶ್‌ನ ತಲೆಗೆ ಬಲವಾಗಿ ಗುದ್ದಿ ಯುವಕನ ತಲೆ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟು ರಸ್ತೆಗೆ ಬಿದ್ದಿತ್ತು. ಇತ್ತ ತಲೆ ಇಲ್ಲದ ದೇಹವು ಬಸ್ಸಿನ ಕಿಟಕಿಯ ಸೀಟಿನಲ್ಲೇ ನೇತಾಡುತ್ತಿತ್ತು.
ತನಿಖೆ ಆರಂಭಿಸಿದ ಪೊಲೀಸರು
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಹಾಗೂ ಕತ್ತರಿಸಿದ ತಲೆಯನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕನ ವಿರುದ್ಧ ಪೊಲೀಸರು ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ವಿನಂತಿ
ಪ್ರಯಾಣದ ಅವಧಿಯಲ್ಲಿ ಕಿಟಕಿಯಿಂದ ದೇಹದ ಯಾವುದೇ ಭಾಗವನ್ನು ಹೊರಚಾಚುವುದು ನೇರವಾಗಿ ಮೃತ್ಯುವನ್ನು ಆಹ್ವಾನಿಸಿದಂತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸುತ್ತದೆ. ಬಡ ಕುಟುಂಬದ ಆಧಾರಸ್ತಂಭವಾಗಬೇಕಿದ್ದ ಯುವಕನ ಈ ಕ್ರೂರ ಸಾವಿನಿಂದಾಗಿ ಶಿರೂರು ಗ್ರಾಮದಲ್ಲಿ ಸದ್ಯ ಶೋಕದ ವಾತಾವರಣ ನಿರ್ಮಾಣವಾಗಿದೆ.
Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!