ನವದೆಹಲಿ: ಜೂನ್ ತಿಂಗಳ ಕೊನೆಯಲ್ಲಿ ಅಪರೂಪದ ಆಕಾಶ ವಿಸ್ಮಯ ಕಾಣಿಸಲಿದೆ. ಹೌದು ಈ ತಿಂಗಳ ಹುಣ್ಣಿಮೆಯಂದು ವಿಶೇಷ ‘ಸ್ಟ್ರಾಬೆರಿ ಮೂನ್’ ಶೀಘ್ರದಲ್ಲೇ ರಾತ್ರಿ ಆಕಾಶದಲ್ಲಿ ಕಂಗೊಳಿಸಲಿದ್ದು, ಹೆಸರೆ ಸೂಚಿಸುವಂತೆ ಈ ಚಂದ್ರನು ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುವುದಿಲ್ಲವಾದರೂ, ಪ್ರಕೃತಿಯ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಉತ್ತರ ಅಮೆರಿಕದ ಸ್ಥಳೀಯ ಬುಡಕಟ್ಟು ಜನಾಂಗದವರು ಆಚರಿಸುತ್ತಿದ್ದ ವೈಲ್ಡ್ ಸ್ಟ್ರಾಬೆರಿ ಹಣ್ಣುಗಳ ಕೊಯ್ಲು ಹಂಗಾಮಿನ ನೆನಪಿಗಾಗಿ ಈ ಜೂನ್ ತಿಂಗಳ ಹುಣ್ಣಿಮೆ ಚಂದ್ರನಿಗೆ ‘ಸ್ಟ್ರಾಬೆರಿ ಮೂನ್’ ಎಂಬ ವಿಶಿಷ್ಟ ಹೆಸರು ಬಂದಿದೆ ಎಂದು ಹಳೆಯ ರೈತರ ಪಂಚಾಂಗ (ಓಲ್ಡ್ ಫಾರ್ಮರ್ಸ್ ಅಲ್ಮಾನಾಕ್) ಉಲ್ಲೇಖಿಸಿದೆ.
ಈ ಬಾರಿಯ ವಿಶೇಷತೆ ಏನು?
ಉತ್ತರ ಗೋಳಾರ್ಧದಿಂದ ನೋಡಿದಾಗ ಈ ಚಂದ್ರನು ಆಕಾಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿ, ಅಂದರೆ ಭೂಮಿಗೆ ತೀರ ಹತ್ತಿರದಲ್ಲಿ(ಹಾರಿಜಾನ್) ಕಾಣಿಸುವುದು ಈ ಬಾರಿಯ ಮುಖ್ಯ ಆಕರ್ಷಣೆಯಾಗಿದೆ. ಇದು ಆಕಾಶದ ಆಗ್ನೇಯ ದಿಕ್ಕಿನಲ್ಲಿ ಮೂಡಿ, ರಾತ್ರಿಯಿಡೀ ಭೂಮಿಯ ಸಮೀಪದಲ್ಲೇ ನಿಧಾನವಾಗಿ ಚಲಿಸುತ್ತದೆ. ಜೊತೆಗೆ, ಈ ಸಮಯದಲ್ಲಿ ಚಂದ್ರನ ಬೆಳಕು ಭೂಮಿಯ ದಟ್ಟವಾದ ವಾತಾವರಣದ ಮೂಲಕ ಹಾದು ಬರುವುದರಿಂದ ನೀಲಿ ತರಂಗಾಂತರಗಳು ಚದುರಿಹೋಗಿ, ಚಂದ್ರನಿಗೆ ಬೆಚ್ಚಗಿನ ಚಿನ್ನದಂತಹ ಅಥವಾ ತಿಳಿ ಕಿತ್ತಳೆ ಬಣ್ಣದ ಹೊಳಪು ಸಿಗುತ್ತದೆ.
ಭಾರತದಲ್ಲಿ ವೀಕ್ಷಣೆಗೆ ಉತ್ತಮ ಸಮಯ ಎಂದು?
ಈ ವರ್ಷದ ಸ್ಟ್ರಾಬೆರಿ ಮೂನ್ ಜೂನ್ 29 ರಂದು ರಾತ್ರಿ ಅಮೆರಿಕದ ಕಾಲಮಾನದ ಪ್ರಕಾರ ಗರಿಷ್ಠ ಪ್ರಕಾಶವನ್ನು ತಲುಪಲಿದೆ. ಭಾರತೀಯ ಕಾಲಮಾನದ (IST) ಪ್ರಕಾರ, ಜೂನ್ 30 ರಂದು ಮುಂಜಾನೆ 5:27 ಕ್ಕೆ ಚಂದ್ರನು ಸಂಪೂರ್ಣವಾಗಿ ಸೂರ್ಯನಿಗೆ ಎದುರಾಗಿ ಪೂರ್ಣ ಪ್ರಕಾಶವನ್ನು ಪಡೆಯಲಿದ್ದಾನೆ.
ಆದರೆ, ಭಾರತದಲ್ಲಿ ಜೂನ್ 29 ರಂದು ಚಂದ್ರೋದಯವಾದ ತಕ್ಷಣವೇ ಇದನ್ನು ವೀಕ್ಷಿಸಲು ಅತ್ಯಂತ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ವಾತಾವರಣದ ಪ್ರಭಾವದಿಂದಾಗಿ ಚಂದ್ರನು ದೊಡ್ಡದಾಗಿ ಕಂಗೊಳಿಸಲಿದ್ದಾನೆ.
ವೀಕ್ಷಕರು ಹಾಗೂ ಛಾಯಾಗ್ರಾಹಕರಿಗೆ ಸಲಹೆಗಳು
- ಫೋಟೋಗ್ರಫಿ ಸಮಯ: ಈ ಸುಂದರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬಯಸುವ ಛಾಯಾಗ್ರಾಹಕರು ಚಂದ್ರೋದಯವಾದ ಮೊದಲ ಒಂದು ಗಂಟೆಯ ಒಳಗೇ ಫೋಟೋ ಕ್ಲಿಕ್ಕಿಸುವುದು ಉತ್ತಮ. ಆಗ ಚಂದ್ರನ ನೈಜ ಚಿನ್ನದ ಬಣ್ಣ ಸುಂದರವಾಗಿ ಮೂಡಿಬರುತ್ತದೆ.
- ಬರಿಗಣ್ಣಿಗೆ ಗೋಚರ: ಈ ಅಪರೂಪದ ದೃಶ್ಯವನ್ನು ಸವಿಯಲು ಯಾವುದೇ ದುಬಾರಿ ಟೆಲಿಸ್ಕೋಪ್ಗಳ ಅಗತ್ಯವಿಲ್ಲ, ಬರಿಗಣ್ಣಿನಿಂದಲೇ ಇದನ್ನು ಸ್ಪಷ್ಟವಾಗಿ ನೋಡಬಹುದು.
GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 28-06-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?