newsics.com|ನ್ಯೂಸಿಕ್ಸ್
ಕಾರಕಾಸ್: ವೆನೆಜುವೆಲಾದಲ್ಲಿ ಬುಧವಾರ ರಾತ್ರಿ ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಎರಡು ಭೀಕರ ಭೂಕಂಪಗಳು ಇಡೀ ದೇಶವನ್ನೇ ನಡುಗಿಸಿವೆ. ಯುಎಸ್‌ಜಿಎಸ್ ಅಂದಾಜಿನ ಪ್ರಕಾರ ಹತ್ತು ಸಾವಿರದಿಂದ ಒಂದು ಲಕ್ಷ ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 7.2 ಮತ್ತು 7.5 ತೀವ್ರತೆ ದಾಖಲಾಗಿರುವ ಈ ಅವಳಿ ಭೂಕಂಪಗಳಿಂದಾಗಿ ರಾಜಧಾನಿ ಕಾರಕಾಸ್ ಸೇರಿದಂತೆ ದೇಶದ ಪ್ರಮುಖ ನಗರಗಳು ಧ್ವಂಸಗೊಂಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾವನ್ನಪ್ಪಿರುವ ಭೀತಿ ಎದುರಾಗಿದೆ.
ಕಟ್ಟಡಗಳ ಅವಶೇಷಗಳಡಿ ನೂರಾರು ಜನರು ಸಿಲುಕಿಕೊಂಡಿದ್ದು, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
10,000 ಕ್ಕೂ ಹೆಚ್ಚು ಸಾವು-ನೋವು ಆತಂಕ
ಭೂಕಂಪದ ತೀವ್ರತೆಗೆ ನೂರಾರು ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳು ನೆಲಸಮವಾಗಿವೆ. ಸದ್ಯಕ್ಕೆ ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ವೆನೆಜುವೆಲಾ ಸರ್ಕಾರ ಇನ್ನೂ ಅಧಿಕೃತ ಸಾವಿನ ಸಂಖ್ಯೆಯನ್ನು ಪ್ರಕಟಿಸಿಲ್ಲ. ಆದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ಈ ದುರಂತದಲ್ಲಿ ಸಾವಿನ ಸಂಖ್ಯೆ 10,000 ದಿಂದ 1,00,000 ಗಡಿ ದಾಟುವ ಭೀತಿ ಇದೆ ಎಂದು ಅಂದಾಜಿಸಲಾಗಿದೆ.
ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ದುರಂತದ ಬೆನ್ನಲ್ಲೇ ದೇಶದ ಹಂಗಾಮಿ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ ಅವರು ವೆನೆಜುವೆಲಾದಾದ್ಯಂತ ತುರ್ತು ಪರಿಸ್ಥಿತಿ (State of Emergency) ಘೋಷಿಸಿದ್ದಾರೆ. “ದೇಶವು ಇತಿಹಾಸದಲ್ಲೇ ಅತ್ಯಂತ ಭೀಕರ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದೆ. ಸಾರ್ವಜನಿಕರು ಧೃತಿಗೆಡಬಾರದು, ರಕ್ಷಣಾ ಪಡೆಗಳೊಂದಿಗೆ ಕೈಜೋಡಿಸಬೇಕು” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂವಹನ, ಸಾರಿಗೆ ಸಂಪೂರ್ಣ ಸ್ಥಗಿತ
ಭೂಕಂಪದ ತೀವ್ರತೆಗೆ ಕಾರಕಾಸ್, ಮಿರಾಂಡಾ, ಲಾ ಗೈರಾ ಮತ್ತು ಅರಾಗುವಾ ಪ್ರಾಂತ್ಯಗಳು ಸಂಪೂರ್ಣ ತತ್ತರಿಸಿವೆ. ಕಾರಕಾಸ್‌ನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಮೆಟ್ರೋ ಹಾಗೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ.
ಕರಾವಳಿ ತೀರದ ಪ್ರದೇಶಗಳಿಗೆ ನೀಡಲಾಗಿದ್ದ ಸುನಾಮಿ ಮುನ್ನೆಚ್ಚರಿಕೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದ್ದರೂ, ಸಾರ್ವಜನಿಕರು ಕರಾವಳಿ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ. ಗಾಯಾಳುಗಳಿಂದ ಆಸ್ಪತ್ರೆಗಳು ತುಂಬಿಹೋಗಿದ್ದು, ರಕ್ತ ಹಾಗೂ ತುರ್ತು ವೈದ್ಯಕೀಯ ನೆರವಿಗಾಗಿ ಸರ್ಕಾರ ಮನವಿ ಮಾಡಿದೆ.
Air India flight ಏರ್ ಇಂಡಿಯಾ ವಿಮಾನ ಪಾಕ್ ವಾಯುಪ್ರದೇಶ ಪ್ರವೇಶಿಸಿದ್ದೇಕೆ? ತೀವ್ರಗೊಂಡ DGCA ತನಿಖೆ
Info News ರಾಜ್ಯದಲ್ಲಿ ಇವತ್ತು, ನಾಳೆ ಪಡಿತರ ವಿತರಣೆ ಸೇರಿ ಯಾವ್ಯಾವ ಸೇವೆ ಇರಲ್ಲ?