newsics.com/ನ್ಯೂಸಿಕ್ಸ್
ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದು ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಚೀನಾ ಸರ್ಕಾರ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಗರ್ಭನಿರೋಧಕ ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ. ಸರ್ಕಾರದ ಈ ಆಕ್ರಮಣಕಾರಿ ನಿರ್ಧಾರವು ವಿಶ್ವದ ನಂ.1 ಕಾಂಡೋಮ್ ಬ್ರ್ಯಾಂಡ್ ‘ಡ್ಯುರೆಕ್ಸ್’ಗೆ ಚೀನಾ ಮಾರುಕಟ್ಟೆಯಲ್ಲಿ ಭಾರೀ ಆಘಾತ ನೀಡಿದೆ.
ಬ್ರಿಟಿಷ್ ಮೂಲದ ಕಂಪನಿ ರೆಕಿಟ್ ಬೆನ್‌ಕೀಸರ್‌ನ ಪ್ರಮುಖ ಉತ್ಪನ್ನವಾದ ಡ್ಯುರೆಕ್ಸ್, ಚೀನಾದಲ್ಲಿ ದಶಕಗಳಿಂದ ಏಕಸ್ವಾಮ್ಯ ಹೊಂದಿತ್ತು. ಆದರೆ, ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದಲ್ಲಿ ಡ್ಯುರೆಕ್ಸ್ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಮಾರುಕಟ್ಟೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದ್ದ ಕಂಪನಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
ಮಕ್ಕಳನ್ನು ಪಡೆಯಲು ಸರ್ಕಾರದ ಆಫರ್!
ಕಳೆದ ವರ್ಷ ಚೀನಾದಲ್ಲಿ ಕೇವಲ 79.2 ಲಕ್ಷ ಮಕ್ಕಳು ಮಾತ್ರ ಜನಿಸಿದ್ದಾರೆ. ಇದು 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, 2016ರಲ್ಲಿ ದಶಕಗಳ ಕಾಲ ಜಾರಿಯಲ್ಲಿದ್ದ ‘ಒಂದೇ ಮಗು’ ನೀತಿಯನ್ನು ಕೈಬಿಟ್ಟು ಈಗ ‘ಮೂರು ಮಕ್ಕಳನ್ನು ಹೊಂದಬಹುದು’ ಎಂಬ ಹೊಸ ಕಾನೂನು ತಂದಿದೆ. ಅಷ್ಟೇ ಅಲ್ಲದೆ, ಮೂರು ವರ್ಷದೊಳಗಿನ ಪ್ರತಿ ಮಗುವಿಗೆ ವಾರ್ಷಿಕ 3,600 ಯುವಾನ್ ಸಬ್ಸಿಡಿ ನೀಡುವ ಮೂಲಕ ಜನರನ್ನು ಮಕ್ಕಳನ್ನು ಪಡೆಯಲು ಉತ್ತೇಜಿಸುತ್ತಿದೆ.