newsics.com/ನ್ಯೂಸಿಕ್ಸ್
ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಂದಿನ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮಹತ್ವದ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದ್ದು, ಈ ಬಾರಿ ಹೊಸ ಸಂಪುಟಕ್ಕೆ ‘ವಯಸ್ಸಿನ ಮಾನದಂಡ’ ನಿಗದಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಸದಾ ಹಿರಿಯರಿಗೇ ಮಣೆ ಹಾಕುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿ, ಈ ಬಾರಿ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಗಂಭೀರ ಚಿಂತನೆ ನಡೆದಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭವಿಷ್ಯದ ದೃಷ್ಟಿಯಿಂದ ಪಕ್ಷದಲ್ಲಿ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ 60 ವರ್ಷದ ಒಳಗಿನ ಯುವ ಹಾಗೂ ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಇದೇ ವೇಳೆ, ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರಿಗೆ ಈ ಬಾರಿ ಸಂಪುಟದಿಂದ ಕೊಕ್ ನೀಡಿ, ಅವರಿಗೆ ಪಕ್ಷದ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸಲು ಚರ್ಚೆಗಳು ನಡೆಯುತ್ತಿವೆ.
ಹೊಸ ಸಂಪುಟ ರಚನೆಯಲ್ಲಿ ಕೇವಲ ವಯಸ್ಸು ಮಾತ್ರವಲ್ಲದೆ, ರಾಜ್ಯದ ಪ್ರಮುಖ ಸಮುದಾಯಗಳ ‘ಜಾತಿ ಸಮೀಕರಣ’ವನ್ನು ಸಮತೋಲನಗೊಳಿಸುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ವಲಯ ಹಾಗೂ ಜಾತಿಗಳಿಗೆ ಸಮಾನ ಪ್ರಾತಿನಿಧ್ಯ ಸಿಗುವಂತೆ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ರಾಜ್ಯದ ಮುಂದಿನ ಸಾರಥಿ ಯಾರು ಮತ್ತು ಹೊಸ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬ ಕುತೂಹಲ ಇದೆ.
DK Shivakumar ಡಿ.ಕೆ.ಶಿವಕುಮಾರ್ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇದೆ?