newsics.com/ನ್ಯೂಸಿಕ್ಸ್
ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಈವರೆಗೆ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ.
ಆದರೆ 58ರ ಹರೆಯದಲ್ಲೂ ಈ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಯಾಕೆ ಇನ್ನೂ ಒಂಟಿಯಾಗಿದ್ದಾರೆ? ಈ ಪ್ರಶ್ನೆ ಕಳೆದ ಮೂರು ದಶಕಗಳಿಂದ ಇಡೀ ದೇಶವನ್ನೇ ಕಾಡುತ್ತಿದೆ. ಇತ್ತೀಚೆಗೆ ಈ ರಹಸ್ಯಕ್ಕೆ ಸ್ವತಃ ಸಲ್ಮಾನ್ ಅವರೇ ಉತ್ತರ ನೀಡಿದ್ದಾರೆ.
ಸಲ್ಮಾನ್ ಖಾನ್ ಜೀವನದಲ್ಲಿ ಪ್ರೀತಿಗೆ ಯಾವತ್ತೂ ಬರವಿರಲಿಲ್ಲ. ಸೋಮಿ ಅಲಿ, ಸಂಗೀತಾ ಬಿಜಲಾನಿಯಿಂದ ಹಿಡಿದು ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್‌ವರೆಗೆ ಹಲವು ನಟಿಯರ ಜೊತೆ ಸಲ್ಮಾನ್ ಹೆಸರು ಕೇಳಿಬಂದಿತ್ತು. ಒಂದು ಕಾಲದಲ್ಲಿ ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಮದುವೆ ಫಿಕ್ಸ್ ಆಗಿ, ಲಗ್ನ ಪತ್ರಿಕೆಯೂ ಅಚ್ಚಾಗಿತ್ತು! ಆದರೆ ಮದುವೆಗೆ ಕೇವಲ 5 ದಿನ ಬಾಕಿ ಇರುವಾಗ ಎಲ್ಲವೂ ಉಲ್ಟಾಪಲ್ಟಾ ಆಗಿ ಮದುವೆ ಕ್ಯಾನ್ಸಲ್ ಆಯ್ತು. ಅಂದಿನಿಂದ ಇಂದಿನವರೆಗೂ ಸಲ್ಲು ಮದುವೆ ಎಂಬ ಎರಡಕ್ಷರದ ಬಗ್ಗೆ ಮೌನ ತಾಳಿದ್ದರು.
ಖಾಸಗಿ ವಾಹಿನಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರು ಸಲ್ಮಾನ್ ಮದುವೆಯ ಬಗ್ಗೆ ನೇರ ಪ್ರಶ್ನೆ ಎಸೆದಾಗ, ಸಲ್ಲು ತುಂಬಾನೇ ಎಮೋಷನಲ್ ಆಗಿ ಮತ್ತು ತಮಾಷೆಯಾಗಿ ಉತ್ತರ ನೀಡಿದರು. “ನನ್ನ ಲೈಫ್‌ನಲ್ಲಿ ಬಂದವರೆಲ್ಲಾ ನನ್ನನ್ನು ಬಿಟ್ಟು ಹೋಗಲು ಕಾರಣ ಬೇರೆ ಯಾರೂ ಅಲ್ಲ, ಸ್ವತಃ ನಾನೇ!” ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು.
ಸಲ್ಮಾನ್ ಮಾತನ್ನು ಮುಂದುವರಿಸುತ್ತಾ, “ಮೊದಲನೇ ಹುಡುಗಿ ನನ್ನನ್ನು ಬಿಟ್ಟು ಹೋದಾಗ, ಆಕೆಯದ್ದೇ ತಪ್ಪು ಇರಬೇಕು ಅಂದುಕೊಂಡೆ. ಎರಡನೇ ಹುಡುಗಿ ಹೋದಾಗಲೂ ಆಕೆಯಲ್ಲೇ ಕೊರತೆ ಹುಡುಕಿದೆ. ಆದರೆ ಮೂರನೇ ಮತ್ತು ನಾಲ್ಕನೇ ಹುಡುಗಿಯೂ ನನ್ನನ್ನು ಬಿಟ್ಟು ಹೋದಾಗ, ನಾನು ಗಂಭೀರವಾಗಿ ಯೋಚಿಸಲು ಶುರು ಮಾಡಿದೆ. ಎಲ್ಲರೂ ನನ್ನನ್ನೇ ಬಿಟ್ಟು ಹೋಗುತ್ತಿದ್ದಾರೆ ಅಂದರೆ, ತಪ್ಪು ಖಂಡಿತವಾಗಿಯೂ ನನ್ನಲ್ಲೇ ಇರಬೇಕು” ಎಂದು ಮನದಾಳದ ಮಾತನ್ನು ಹಂಚಿಕೊಂಡರು.