newsics.com/ನ್ಯೂಸಿಕ್ಸ್
ಖೈರ್ತಾಲ್ – ಭಿವಾಡಿ (ರಾಜಸ್ಥಾನ): ಎಂಟು ತಿಂಗಳ ತನ್ನ ಹೆಣ್ಣು ಮಗುವಿಗೆ ಹೆತ್ತ ತಾಯಿಯೇ ಆ್ಯಸಿಡ್ ಕುಡಿಸಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಖೈರ್ತಾಲ್- ಭಿವಾಡಿ ಜಿಲ್ಲೆಯ ಭಿವಾಡಿ ಪಟ್ಟಣದಿಂದ ವರದಿಯಾಗಿದೆ.
ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದು, ಅದು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿವಾಡಿಯ ಚೌಕ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಇದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಪ್ರಕಾರ, ಘಟನೆ ಸಂದರ್ಭದಲ್ಲಿ ಮಗುವಿನೊಂದಿಗೆ ತಾಯಿ ಒಬ್ಬರೆ ಮನೆಯಲ್ಲಿದ್ದರು. ಮಗುವಿನ ತಂದೆ ಮೋಹಿತ್ ಕೆಲಸಕ್ಕಾಗಿ ಬೆಳಗ್ಗೆ ಕಚೇರಿಗೆ ತೆರಳಿದ್ದರು. ಈ ವೇಳೆ, ತಾಯಿ ಮಗುವಿಗೆ ಆ್ಯಸಿಡ್ ಕುಡಿಸಿದ್ದಾರೆ.
ಮಗುವಿನ ಆರೋಗ್ಯ ಹದಗೆಟ್ಟಿದ್ದು, ತಕ್ಷಣಕ್ಕೆ ಕುಟುಂಬ ಸದಸ್ಯರು ಮಗುವನ್ನು ಭಿವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದು, ದೇಹದ ಒಳಗಿನ ಅಂಗಗಳು ಗಾಯಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಆಳ್ವಾರ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಸದ್ಯ ಮಗು ಆಳ್ವಾರ್ನ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಂದಮ್ಮನ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಘಟನೆಯನ್ನು ದೃಢಪಡಿಸಿರುವ ಹೆಚ್ಚುವರಿ ಎಸ್ಪಿ ಶ್ರೀಮಾನ್ ಮೀನಾ, ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಾಯಿ ಮಗುವಿಗೆ ಆ್ಯಸಿಡ್ ನೀಡಿರುವ ಕುರಿತು ದೂರು ಸ್ವೀಕರಿಸಿದ್ದೇವೆ. ಈ ಘಟನೆಯ ಹಿಂದೆ ತಾಯಿಯ ಉದ್ದೇಶವೇನು ಎಂಬುದು ಸೇರಿದಂತೆ ಎಲ್ಲ ಆಯಾಮದಲ್ಲಿ ತನಿಖೆ ಸಾಗಿದೆ. ಆ್ಯಸಿಡ್ ಅನ್ನು ತಾಯಿ ಯಾವ ಉದ್ದೇಶಕ್ಕಾಗಿ ಮಗುವಿಗೆ ಕುಡಿಸಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ವೈದ್ಯಕೀಯ ವರದಿ ಮತ್ತು ತನಿಖೆಯ ಬಳಿಕ ಕಂಡು ಬರುವ ಅಂಶಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚಪ್ಪಲಿ ಧರಿಸಿ ಬಾದಾಮಿ ಗುಹಾಲಯಕ್ಕೆ ಬಂದ ಮುಸ್ಲಿಂ ಯುವತಿಗೆ ಭಕ್ತರ ಕ್ಲಾಸ್, ವೈರಲ್ ವಿಡಿಯೋ ನೋಡಿ
ಬೀದಿ ನಾಯಿ ಹಾವಳಿ ನಿರ್ಲಕ್ಷ್ಯ ಅಸಾಧ್ಯ, ಅವುಗಳನ್ನು ತೆರವುಗೊಳಿಸಿ: ಸುಪ್ರೀಂ ಖಡಕ್ ಆದೇಶ