newsics.com/ನ್ಯೂಸಿಕ್ಸ್
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಇಂದು ಸಹ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಕೇರಳದ ಆಗ್ನೇಯ ಕರಾವಳಿ ಹೊಂದಿಕೊಂಡಂತೆ ಲಕ್ಷದ್ವೀಪದಲ್ಲಿ 1.5 ಕಿ.ಮೀ. ಎತ್ತರದಲ್ಲಿ ಹಾಗೂ ಕೊಮೊರಿನ್ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು 5.8 ಕಿ.ಮೀ. ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಕೇರಳ ಕರಾವಳಿ, ಕರಾವಳಿ ಕರ್ನಾಟಕ, ಒಳನಾಡು ಕರ್ನಾಟಕದಿಂದ ಹಿಡಿದು ಮಹಾರಾಷ್ಟ್ರದವರೆಗೆ 0.9ಕಿಮೀ ಎತ್ತರದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ.