newsics.com/ನ್ಯೂಸಿಕ್ಸ್
ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿಗೆ ಬಯೋಮೆಟ್ರಿಕ್ ಬದಲಿಗೆ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಕರ್ತವ್ಯ ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಖಾಯಂ ಶಿಕ್ಷಕರು, ಮುಖ್ಯ ಶಿಕ್ಷಕರು, ತತ್ಸಮಾನ ವೃಂದ ಅಧಿಕಾರಿಗಳು ಮತ್ತು ಎಲ್ಲಾ ಕಛೇರಿಗಳಲ್ಲಿರುವ ಖಾಯಂ ಬೋಧಕೇತರ ಸಿಬ್ಬಂದಿ/ ಅಧಿಕಾರಿಗಳ ಹಾಜರಾತಿಯನ್ನು ಗುರುತಿಸಲು ಮೇಲ್ವಿಚಾರಣೆ ಮಾಡಲು ಕರ್ನಾಟಕ ಅಡ್ವಾನ್ಸನ್ ಅಟೆಂಡೆನ್ ಮ್ಯಾನೇಜಮೆಂಟ್ ಸಿಸ್ಟಮ್ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸುವ ಕುರಿತು ಆದೇಶಿಸಲಾಗಿದೆ.
2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 451ರಲ್ಲಿ, “ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖ ಚಹರೆ ಗುರುತಿಸುವ ಅಪ್ಲಿಕೇಶನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲಾ ಇಲಾಖೆಗಳಲ್ಲಿ ಕರ್ನಾಟಕ ಅಡ್ವಾನ್ ಅಟೆಂಡನ್ ಮ್ಯಾನೇಜೆಂಟ್ ಸಿಸ್ಟಮ್ (ಕರ್ತವ್ಯ ಕೆ.ಎ.ಎ.ಎಂ.ಎಸ್) ಅನ್ನು ಜಾರಿಗೆ ತರಲಾಗುವುದು’ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ಸಿಬ್ಬಂದಿಗೆ ಕರ್ತವ್ಯ ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿಯನ್ನು ನಿರ್ವಹಿಸಲು ಪ್ರಸ್ತಾಪಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಫೋಡ್ ಮಾಡಿಕೊಳ್ಳಬಹುದು ಮತ್ತು ಕರ್ತವ್ಯ ಮೊಬೈಲ್ ಅಪ್ಲಿಕೇಶನ್ ಬಳಸಿ HRMS ನಲ್ಲಿ ನೋಂದಾಯಿತ ಪ್ರಥಮ ಕೆಜಿಐಡಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡು ತಮ್ಮ ಕರ್ತವ್ಯದ ಸ್ಥಳದಲ್ಲಿ ಹಾಜರಾತಿ ಗುರುತಿಸಬಹುದಾಗಿರುತ್ತದೆ.
ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಮೂಲಕ ಸಿಬ್ಬಂದಿಯ ಮುಖಚಹರೆ ಪರಿಶೀಲನೆಯೊಂದಿಗೆ ಸುರಕ್ಷಿತ ಲಾಗಿನ್ ಮೂಲಕ ಅಧಿಕೃತ ಖಾಯಂ ಸಿಬ್ಬಂದಿಯ ಹಾಜರಾತಿಯನ್ನು ಗುರುತಿಸುವುದನ್ನು ಖಚಿತಪಡಿಸುತ್ತದೆ ಹಾಗೂ ಸುಧಾರಿತ ಹಾಜರಾತಿ ಡ್ಯಾಶ್‌ಬೋರ್ಡ್ ಮತ್ತು ವರದಿಗಳನ್ನು ತ್ವರಿತವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಒದಗಿಸುತ್ತದೆ.