ಹಾರರ್ ಕಾಮಿಡಿ ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಇದೀಗ ತಮ್ಮ ಬಹುನಿರೀಕ್ಷಿತ ‘ಕಾಂಚನಾ 4’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಲಾರೆನ್ಸ್ ಅವರ ರೂಪವು ಅಕ್ಷರಶಃ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಾಲಾ’ ಚಿತ್ರದ ಶೈಲಿಯನ್ನು ನೆನಪಿಸುವಂತಿದೆ.
ತಮ್ಮ ನೆಚ್ಚಿನ ಗುರು ರಜನಿಕಾಂತ್ ಅವರ ಮ್ಯಾನರಿಸಂ ಅಳವಡಿಸಿಕೊಳ್ಳುವಲ್ಲಿ ಲಾರೆನ್ಸ್ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಕಪ್ಪು ಶರ್ಟ್, ಬಿಳಿ ಗಡ್ಡ ಹಾಗೂ ಕಪ್ಪು ಕೂದಲಿನ ಕಟ್ಟುಮಸ್ತಾದ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು ಸಿನಿಮಾ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂಬ ಸುಳಿವು ನೀಡಿದ್ದಾರೆ.
ಈ ಚಿತ್ರದಲ್ಲಿ ತಾರಾಗಣವೂ ಬಹಳ ದೊಡ್ಡದಿದೆ. ಬಾಲಿವುಡ್ ಬೆಡಗಿ ನೋರಾ ಫತೇಹಿ ಈ ಸಿನಿಮಾ ಮೂಲಕ ಕಾಲಿವುಡ್‌ಗೆ ಕಾಲಿಡುತ್ತಿದ್ದು, ಅವರೊಂದಿಗೆ ಪೂಜಾ ಹೆಗ್ಡೆ ಹಾಗೂ ಸ್ವಕ್ಷ ಅಯ್ಯರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನೆಗೆಟಿವ್ ರೋಲ್‌ನಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್ ಮತ್ತು ಹಿರಿಯ ನಟ ಆನಂದ್ ರಾಜ್ ಅಬ್ಬರಿಸಲಿದ್ದಾರೆ.
ಸಿನಿಮಾದ ವಿಶೇಷವೆಂದರೆ, ರಾಘವ ಲಾರೆನ್ಸ್ ಈ ಚಿತ್ರಕ್ಕಾಗಿ ಪಡೆಯುವ ಸಂಭಾವನೆಯನ್ನು ಒಂದು ಸತ್ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ತಮ್ಮ ಮೊದಲ ಮನೆಯನ್ನು ಬಡ ಮಕ್ಕಳಿಗಾಗಿ ಶಾಲೆಯನ್ನಾಗಿ ಪರಿವರ್ತಿಸಲು ಈ ಹಣವನ್ನು ಬಳಸುವುದಾಗಿ ಅವರು ಘೋಷಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸನ್ ಪಿಕ್ಚರ್ಸ್ ಹಾಗೂ ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಶೂಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಮುನಿ ಸರಣಿಯ ಹಿಂದಿನ ಸಿನಿಮಾಗಳಂತೆಯೇ ಈ ಭಾಗವೂ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎಂಬ ನಿರೀಕ್ಷೆ ಇದೆ.
https://www.instagram.com/p/DXokzVYE9md/?igsh=MTM4NWhvc3drNW5lMw==