ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, ‘ಹಾರ್ದಿಕ’ ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.
ನಾನು ಬೆಂಗಳೂರಿಗೆ ಬಂದಾಗಿತ್ತು. ಒಂದಷ್ಟು ಕಡೆ ಆಫರ್ ಸಿಕ್ಕಿದ್ದವು. ಅಲ್ಲಿ ತುಳು ಮಾತನಾಡುವ ಕಾರಣ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಒಂದು ಚಾನೆಲ್ನಲ್ಲಿ ಆಫರ್ ಕೊಟ್ಟರು. ಆದರೆ ಹಾರ್ದಿಕ ಸ್ವಾಗತ ಹೇಳಲು ಬರದೇ ಒದ್ದಾಡಿಬಿಟ್ಟೆ. ಎಷ್ಟು ಟೇಕ್ ತೆಗೆದುಕೊಂಡರೂ ದಿ ಬದಲು ತಿ ಆಗಿ ಅಪಾರ್ಥ ಆಗುತ್ತಿತ್ತು. ನೋಡುವಷ್ಟು ನೋಡಿ ಮುಖ್ಯಸ್ಥರು ನನ್ನನ್ನುಮನೆಗೆ ಕಳುಹಿಸಿಬಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ ಅನುಶ್ರೀ.
ಕೈಯಲ್ಲಿ ಕಾಸಿರಲಿಲ್ಲ. ಪಿಜಿಯಲ್ಲಿ ಇದ್ದೆ. ಅದರ ಬಾಡಿಗೆಗೂ ದುಡ್ಡು ಇರಲಿಲ್ಲ. ಮೂರು ತಿಂಗಳು ದುಡ್ಡೇ ಕೊಡಲಿಲ್ಲ. ಮುಂದಿನ ತಿಂಗಳು ಕೊಡದೇ ಹೋದರೆ ಬಿಟ್ಟುಹೋಗುವಂತೆ ಹೇಳಿದಾಗಲೇ ನನ್ನ ಬುಡಕ್ಕೆ ಬಂದಿದ್ದು ಎಂದು ನೋವಿನ ದಿನಗಳ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಹಸಿವು ಏನು ಬೇಕಾದರೂ ಕಲಿಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಕನ್ನಡವನ್ನು ಕಲಿಯಲೇಬೇಕು. ನಿರೂಪಣಾ ಕ್ಷೇತ್ರದಲ್ಲಿ ಛಾಪು ಮೂಡಿಸಲೇಬೇಕು ಎಂದು ಪಣ ತೊಟ್ಟೆ. ಅಲ್ಲಿ ಇದ್ದವರ ಬಳಿಯೆಲ್ಲಾ ಕನ್ನಡ ಮಾತನಾಡಿದೆ. ಅಂಗಡಿಯವರು, ತರಕಾರಿಯವರು ಹೀಗೆ ಎಲ್ಲರ ಬಳಿಯೂ ಕನ್ನಡ ಮಾತನಾಡಿ ಕಷ್ಟಪಟ್ಟು ಕಲಿತೆ ಎಂದಿದ್ದಾರೆ.
ಕೊನೆಗೆ, ಅದ್ಯಾವ ಪರಿಯಲ್ಲಿ ಬದಲಾಗಿ ಬಿಟ್ಟೆ ಎಂದರೆ, ನನ್ನ ಮಾತು ಕೇಳಿ ಅವರೇ ಆಶ್ವರ್ಯಗೊಂಡರು. ಆಗ ಎರ್ರಾಬಿರ್ರಿ ಮಾತನಾಡುತ್ತಿದ್ದುದು ನಾನೇನಾ ಎನ್ನುವಷ್ಟರಮಟ್ಟಿಗೆ ಬದಲಾಗಿ ಬಿಟ್ಟೆ. ಆ್ಯಂಕರಿಂಗ್ ನನಗೆ ಒಲಿಯಿತು. ಅದರಲ್ಲಿಯೇ ಮುಂದೆ ಬಂದೆ ಎಂದು ನೆನಪಿಸಿಕೊಂಡಿದ್ದಾರೆ ಆ್ಯಂಕರ್ ಅನುಶ್ರೀ.