https://youtube.com/shorts/EOt-aJYYg5k?si=DmDCY_9WwqDDfAlH
newsics.com
ನೆಲಮಂಗಲ: ಅಡಿಕೆ ತೋಟದ ಪಕ್ಕದಲ್ಲಿ ಮಹಿಳೆಯ ತಲೆ ಬುರುಡೆ, ಕೈ-ಕಾಲುಗಳ ಕೆಲ ಮೂಳೆಗಳು ಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಗ್ರಾಮದಲ್ಲಿ ನಡೆದಿದೆ.
ಯಮುನಾ (35) ಮೃತ ಮಹಿಳೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಸದ್ಯ ಇವರ ಅಸ್ಥಿಪಂಜರ ಪತ್ತೆಯಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆ ಯಮುನಾ ತುಮಕೂರು ನಿವಾಸಿ. 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ಆತನೊಂದಿಗೆ ದೊಡ್ಡಬಳ್ಳಾಪುರದಲ್ಲಿ ವಾಸವಿದ್ದರು.
ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಯಮುನಾ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಮಾರ್ಚ್ 21ರಂದು ಯಮುನಾ ಹುಟ್ಟುಹಬ್ಬ ಇತ್ತು. ಹೀಗಾಗಿ ಭೇಟಿ ಮಾಡುವಂತೆ ರಾಘವೇಂದ್ರ ಒತ್ತಾಯಿಸಿದ್ದ. ಕೆಲಸ ಮುಗಿಸಿ ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.
ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಸಿಕ್ಕಿದ್ದರಿಂದ, ಯಮುನಾ ಎಂದು ಗುರುತಿಸಲಾಗಿದೆ.
ರಾಘವೇಂದ್ರ ಎಂಬಾತನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.