newsics.com
ನವದೆಹಲಿ:ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶೇ. 60ರಷ್ಟು ಸೀಟುಗಳನ್ನು ಉಚಿತವಾಗಿ (ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ) ಹಂಚಿಕೆ ಮಾಡಬೇಕು ಎಂಬ ತನ್ನ ಹಿಂದಿನ ಆದೇಶವನ್ನು ಕೇಂದ್ರ ಸರ್ಕಾರ ಈಗ ಹಿಂತೆಗೆದುಕೊಂಡಿದೆ. ಈ ನಿಯಮ ಜಾರಿಗೆ ಬಂದ ಕೇವಲ ಮೂರು ವಾರಗಳಲ್ಲಿಯೇ ಸರ್ಕಾರ ಈ ‘ರೋಲ್ ಬ್ಯಾಕ್’ನಿರ್ಧಾರ ಕೈಗೊಂಡಿದೆ.
ವಿಮಾನಯಾನ ಸಂಸ್ಥೆಗಳು ವೆಬ್ ಚೆಕ್-ಇನ್ ಸಮಯದಲ್ಲಿ ಶೇ. 60ರಷ್ಟು ಸೀಟುಗಳನ್ನು ಪ್ರಯಾಣಿಕರಿಗೆ ಉಚಿತವಾಗಿ ನೀಡಬೇಕು ಮತ್ತು ಉಳಿದ ಶೇ. 40ರಷ್ಟು ಸೀಟುಗಳಿಗೆ ಮಾತ್ರ ಆಯ್ಕೆಯ ಶುಲ್ಕ ವಿಧಿಸಬೇಕು ಎಂದು ಕೇಂದ್ರವು ಮಾರ್ಚ್‌ನಲ್ಲಿ ಆದೇಶಿಸಿತ್ತು.
ವಿಮಾನಯಾನ ಸಂಸ್ಥೆಗಳ ಒತ್ತಡ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಈಗ ಈ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರರ್ಥ, ಇನ್ನು ಮುಂದೆ ವಿಮಾನಯಾನ ಸಂಸ್ಥೆಗಳು ಮೊದಲಿನಂತೆಯೇ ಬಹುತೇಕ ಎಲ್ಲಾ ಸೀಟುಗಳಿಗೆ ‘ಪ್ರಾಫಿಟ್ ಮೇಕಿಂಗ್’ ಮಾದರಿಯಲ್ಲಿ ಶುಲ್ಕ ವಿಧಿಸಲು ಅವಕಾಶ ಪಡೆದಂತಾಗಿದೆ.ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ವೆಬ್ ಚೆಕ್-ಇನ್ ಮಾಡುವಾಗ ಉಚಿತ ಸೀಟುಗಳು ಸಿಗುವುದು ಕಷ್ಟವಾಗಲಿದೆ. ಇಷ್ಟದ ಸೀಟು ಬೇಕೆಂದರೆ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸುವುದು ಅನಿವಾರ್ಯವಾಗಲಿದೆ.