newsics.com
ಬೆಂಗಳೂರು : ಹಣಕಾಸಿನ ವಿಚಾರಕ್ಕೆ ತನ್ನ ಹೆಂಡತಿ ಕುತ್ತಿಗೆ ಕಾಲಿಟ್ಟು ತುಳಿದು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ.
ಮೃತಳನ್ನು ಕಾವ್ಯ (34) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ದರಿಯಪ್ಪ ಮತ್ತು ಕಾವ್ಯ (34) ದಂಪತಿಗಳು ನಾಗಸಂದ್ರದಲ್ಲಿ ವಾಸವಾಗಿದ್ದರು. ದರಿಯಪ್ಪ ನಗರದಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಆದರೆ, ಕಳೆದ ಒಂದು ವಾರದಿಂದ ಇವರ ನಡುವೆ ಹಣಕಾಸಿನ ವಿಚಾರವಾಗಿ ತೀವ್ರ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ದರಿಯಪ್ಪ ಮನೆಗೆ 2 ಲಕ್ಷ ರೂಪಾಯಿ ಹಣವನ್ನು ತಂದಿಟ್ಟಿದ್ದನು. ಈ ಹಣವನ್ನು ತನ್ನ ಅಣ್ಣನಿಗೆ ನೀಡಬೇಕೆಂದು ಕಾವ್ಯ ಪಟ್ಟು ಹಿಡಿದಿದ್ದರು. ಇದೇ ವಿಷಯವಾಗಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ದಂಪತಿ ನಡುವೆ ದೊಡ್ಡ ಜಗಳ ನಡೆದಿದೆ.
ಸಿಟ್ಟಿಗೆದ್ದ ದರಿಯಪ್ಪ, ಪತ್ನಿ ಕಾವ್ಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಕಾವ್ಯ ಕೆಳಗೆ ಬಿದ್ದಾಗ ಆಕೆಯ ಕುತ್ತಿಗೆಯ ಮೇಲೆ ಕಾಲಿಟ್ಟು ಜೋರಾಗಿ ತುಳಿದಿದ್ದಾನೆ. ಉಸಿರುಗಟ್ಟಿ ಕಾವ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಆರಂಭದಲ್ಲಿ ಇದು ಕೇವಲ ಹಣದ ವಿಚಾರಕ್ಕೆ ನಡೆದ ಕೊಲೆ ಎಂದು ಭಾವಿಸಲಾಗಿತ್ತು. ಆದರೆ ದರಿಯಪ್ಪನ ಸ್ನೇಹಿತ ವೆಂಕಟಾಚಲಯ್ಯ ನೀಡಿರುವ ಹೇಳಿಕೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್ ನೀಡಿದೆ. ದರಿಯಪ್ಪನಿಗೆ ವಿಪರೀತ ‘ಹೆಣ್ಣುಮಕ್ಕಳ ಶೋಕಿ’ ಇತ್ತು ಎಂದು ವೆಂಕಟಾಚಲಯ್ಯ ಬಯಲು ಮಾಡಿದ್ದಾರೆ.
ಸದ್ಯ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ದರಿಯಪ್ಪನನ್ನು ವಶಕ್ಕೆ ಪಡೆದಿದ್ದಾರೆ.
https://www.newsics.com/2026/04/03/the-white-bolero-that-caused-fear-girls-are-their-target/